ರಾಜ್ಯದ ಎಂಟು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸೋಲನ್ನನುಭವಿಸಿರುವ ಬಗ್ಗೆ ಕಾಂಗ್ರೆಸ್ ಸೋಮವಾರ ಸಂಜೆ ಕರೆದಿರುವ ಆತ್ಮಾವಲೋಕನ ಸಭೆಗೆ ಪಕ್ಷದ ನಾಯಕರಾದ ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ, ಎಂ.ಪಿ.ಪ್ರಕಾಶ್ ಹಾಗೂ ಸಿದ್ದರಾಮಯ್ಯ ಗೈರುಹಾಜರಾಗಿದ್ದಾರೆ.
ಇತ್ತೀಚೆಗೆ ಎಂಟು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುನ್ನುಣ್ಣುವ ಮೂಲಕ ಭಾರೀ ಮುಖಭಂಗ ಅನುಭವಿಸಿತ್ತು. ಆ ಹಿನ್ನೆಲೆಯಲ್ಲಿ ಸೋಲಿನ ಕುರಿತು ಪರಾಮರ್ಶೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆದಿತ್ತು.
ಕಾಂಗ್ರೆಸ್ ಆತ್ಮಾವಲೋಕನ ಸಭೆಗೆ ತಾವು ಹೋಗಲ್ಲ ಅಂತ ಸಿದ್ದರಾಮಯ್ಯ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಪಕ್ಷದ ನಾಯಕರಾದ ಎಂ.ಪಿ.ಪ್ರಕಾಶ್ ಕೂಡ ಗೈರುಹಾಜರಾಗಿರುವುದು ಒಂದೆಡೆ ಕುತೂಹಲಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಪಕ್ಷದೊಳಗಿನ ಅಸಮಾಧಾನ ಸ್ಫೋಟಗೊಂಡಂತಾಗಿದೆ. |