ಡಿಸೇಲ್ ಹಾಗೂ ಟಯರ್ ಬೆಲೆ ಇಳಿಕೆ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾನುವಾರ ಮಧ್ಯರಾತ್ರಿಯಿಂದ ದೇಶ ಹಾಗೂ ರಾಜ್ಯಾದ್ಯಂತ ಆರಂಭಗೊಂಡಿರುವ ಲಾರಿ ಮುಷ್ಕರಕ್ಕೆ ಭಾಗಶಃ ಬೆಂಬಲ ದೊರೆತಿದ್ದು, ಸರಕು ಸಾಗಣೆಯಲ್ಲಿ ಏರುಪೇರು ಉಂಟಾಗಿದೆ.
ಬೆಂಗಳೂರು ನಗರಕ್ಕೆ ಪ್ರತಿದಿನ 30ಸಾವಿರಕ್ಕೂ ಅಧಿಕ ಲಾರಿಗಳು ಆಗಮಿಸುವುದರಿಂದ ಮುಷ್ಕರದಿಂದಾಗಿ ಜನಸಾಮಾನ್ಯರು ಪರದಾಡುವಂತಾಯಿತು. ಯಶವಂತಪುರ, ಕೆ.ಆರ್.ಪುರ, ಮಾರ್ಕೆಟ್, ಶಿವಾಜಿನಗರ ಮಾರುಕಟ್ಟೆ ಎಪಿಎಂಸಿ ಸೇರಿದಂತೆ ಹಲವು ಕಡೆ ಸರಕುಗಳು ಸರಬರಾಜಾಗಿಲ್ಲ.
ಲಾರಿ ಮಾಲೀಕರು ಅನಿರ್ದಿಷ್ಟವಾಗಿ ಮುಷ್ಕರ ಆರಂಭಿಸಿದ್ದರಿಂದ ತೈಲ, ಆಹಾರ ಪದಾರ್ಥಗಳು, ಮರಳು,ಜಲ್ಲಿ, ಕಬ್ಬಿಣ, ಸಿಮೆಂಟ್ ಸೇರಿದಂತೆ ಯಾವುದೇ ರೀತಿಯ ಸರಕು ಸಾಗಣೆಯಾಗದಿರುವುದರಿಂದ ಜನಸಾಮಾನ್ಯರಿಗೂ ಬಿಸಿ ತಟ್ಟುವಂತಾಗಿತ್ತು.
ಮುಷ್ಕರ ಕೈಬಿಡಿ: ದೇಶವ್ಯಾಪಿ ನಡೆಸುತ್ತಿರುವ ಮುಷ್ಕರವನ್ನು ಕೈಬಿಡುವಂತೆ ಕೇಂದ್ರ ಸರ್ಕಾರ ಲಾರಿ ಮಾಲಿಕರ ಸಂಘಕ್ಕೆ ಮನವಿ ಮಾಡಿಕೊಂಡಿದೆ, ಇಲ್ಲದಿದ್ದಲ್ಲಿ ಪರವಾನಿಗೆಯನ್ನು ರದ್ದುಪಡಿಸುವ ಬೆದರಿಕೆ ಒಡ್ಡಿದೆ. |