ಈವರೆಗೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಭೂಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ನಕ್ಸಲರು, ಈಗ ಧಾರ್ಮಿಕ ಮುಖಂಡರನ್ನು ತಮ್ಮ ಗುರಿಯಾಗಿ ಮಾಡಿಕೊಂಡಿದ್ದಾರೆ.
ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ನಕ್ಸಲರು ಕಿಡಿ ಕಾರಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಇ-ಮೇಲ್ ಮೂಲಕ ಪತ್ರ ರವಾನಿಸಿರುವ ನಕ್ಸಲರು ಪೇಜಾವರ ಶ್ರೀಗಳು ಮತ್ತು ಧರ್ಮಸ್ಥಳ ಧರ್ಮಾಧಿಕಾರಿಯವರು ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳು ಜನರಲ್ಲಿ ಒಡಕುಂಟು ಮಾಡುವ ತಂತ್ರ ಎಂದು ಆರೋಪಿಸಿದ್ದಾರೆ.
ಧರ್ಮಸ್ಥಳ ದೇವಾಲಯದಿಂದ ಕೈಗೊಳ್ಳಲಾದ ಗ್ರಾಮೀಣ ಅಭಿವೃದ್ದಿ ಯೋಜನೆಗಳಲ್ಲಿ ಜನರ ಕಲ್ಯಾಣದ ಉದ್ದೇಶವಿಲ್ಲ. ತಮ್ಮ ಭೂಮಿಯನ್ನು ರಕ್ಷಿಸಿಕೊಳ್ಳುವ ಪ್ರತಿಭಟನೆಯಿಂದ ಜನ ದೂರವಿರುವಂತೆ ಮಾಡುವುದಷ್ಟೇ ಇದರ ಉದ್ದೇಶ ಎಂದು ನಕ್ಸಲರು ಟೀಕಿಸಿದ್ದಾರೆ. ಈ ಪ್ರದೇಶಗಳಲ್ಲಿ ಕಾರ್ಯಕ್ರಮ ಕೈಗೊಳ್ಳಲು ಇವರಿಗೆ ಅವಕಾಶ ನೀಡುವುದಿಲ್ಲ ಎಂಬುದನ್ನು ಹೇಳಿಲ್ಲವಾದರೂ, ಎರಡೂ ಧಾರ್ಮಿಕ ಸಂಸ್ಥೆಗಳು ಜನರನ್ನು ತಪ್ಪುದಾರಿಗೆಳೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
|