ಕಾಂಗ್ರೆಸ್‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ಯಾವ ರೀತಿಯಲ್ಲಿ ಪ್ರಯತ್ನಿಸಿದರೂ ಅವರು ಇದಕ್ಕೆ ಸಮ್ಮತಿಸುತ್ತಿಲ್ಲ. ಈವರೆಗೆ ಪಕ್ಷದ ಚಟುವಟಿಕೆಗಳಿಂದ ದೂರವಿದ್ದು, ಹೈಕಮಾಂಡ್ ವಿರುದ್ಧ ತಮ್ಮ ಪ್ರತಿರೋಧ ಮುಂದುವರಿಸಿರುವ ಸಿದ್ದರಾಮಯ್ಯ ಜನವರಿ 21 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಹಿಂದುಳಿದವರ ರಾಲಿಯಲ್ಲಿ ಪ್ರಜಾರಾಜ್ಯಂ ಸ್ಥಾಪಕ ಮೆಗಾಸ್ಟಾರ್ ಚಿರಂಜೀವಿಯೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದು ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟುವ ಗಾಳಿಸುದ್ದಿಗೆ ಮತ್ತಷ್ಟು ಸಾಥ್ ನೀಡಿದೆ. ಸಿದ್ದರಾಮಯ್ಯ ಬೆಂಬಲಿಗರು ಡೆಮಾಕ್ರಟಿಕ್ ಜನತಾ ದಳ ಪಕ್ಷ ಕಟ್ಟಿ ಪ್ರಜಾರಾಜ್ಯಂನೊಂದಿಗೆ ಮೈತ್ರಿ ಸಾಧಿಸುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಉಭಯ ಪಕ್ಷಗಳು ಬೃಹತ್ ಪಕ್ಷವಾಗಿ ಒಗ್ಗೂಡುವ ಕುರಿತು ನಿರ್ಧರಿಸಬಹುದು ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ನವದೆಹಲಿಗೆ ಆಹ್ವಾನಿಸಿದ್ದಾರೆಂದು ಬಲ್ಲ ಮೂಲಗಳು ಹೇಳಿವೆ. |