ನಗರದ ಕೊಳಚೆ ಪ್ರದೇಶದ ಜನರ ಆರೋಗ್ಯ ಸುಧಾರಣೆಗಾಗಿ 'ಉಷಾ' ಯೋಜನೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅನ್ಬುಮಣಿ ರಾಮದಾಸ್ ಹೇಳಿದರು.
ನಾಲ್ಕು ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಫೆಬ್ರುವರಿ ತಿಂಗಳು ದೇಶದ 429 ನಗರಗಳಲ್ಲಿ ಜಾರಿಗೆ ಬರಲಿದೆ. ಸುಮಾರು 23 ಕೋಟಿ ಜನ ಸಮುದಾಯವನ್ನು ಇದು ತಲುಪಲಿದೆ ಎಂದರು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆದ ಶುಶ್ರೂಷ ವಸತಿ ನಿಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ದೇಶದಾದ್ಯಂತ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತಿದೆ. ಎಲ್ಲಾ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಮಸದರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನಕ್ಕೆ ಬಜೆಟ್‌ನಲ್ಲಿ 450 ಕೋಟಿ ರೂ. ನೀಡುವಂತೆ ಕೋರಲಾಗಿದೆ ಎಂದರು.
11ನೇ ಪಂಚವಾರ್ಷಿಕ ಯೋಜನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಲಾಗಿರುವ ಅನುದಾನದಲ್ಲಿ 3.9 ಕೋಟಿ ರೂ.ಗಳನ್ನು ನರ್ಸಿಂಗ್ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಆಶಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು.
|