ಡಿಸೇಲ್ ಬೆಲೆ ಇಳಿಕೆ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇದರೊಂದಿಗೆ ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಲಾರಿಗಳೂ ಕೂಡ ಮುಷ್ಕರಕ್ಕೆ ಇಳಿದಿರುವ ಪರಿಣಾಮ ಬೆಲೆ ಏರಿಕೆ ಆತಂಕ ಎದುರಾಗಿದೆ.
ಬೆಂಗಳೂರು ನಗರಕ್ಕೆ ಪ್ರತಿದಿನ 30ಸಾವಿರಕ್ಕೂ ಅಧಿಕ ಲಾರಿಗಳು ಆಗಮಿಸುವುದರಿಂದ ಮುಷ್ಕರದಿಂದಾಗಿ ಜನಸಾಮಾನ್ಯರು ಪರದಾಡುವಂತಾಯಿತು. ಯಶವಂತಪುರ, ಕೆ.ಆರ್.ಪುರ, ಮಾರ್ಕೆಟ್, ಶಿವಾಜಿನಗರ ಮಾರುಕಟ್ಟೆ ಎಪಿಎಂಸಿ ಸೇರಿದಂತೆ ಹಲವು ಕಡೆ ಸರಕುಗಳು ಸರಬರಾಜಾಗಿಲ್ಲ.
ಲಾರಿ ಮಾಲೀಕರು ಅನಿರ್ದಿಷ್ಟವಾಗಿ ಮುಷ್ಕರ ಆರಂಭಿಸಿದ್ದರಿಂದ ತೈಲ, ಆಹಾರ ಪದಾರ್ಥಗಳು, ಮರಳು,ಜಲ್ಲಿ, ಕಬ್ಬಿಣ, ಸಿಮೆಂಟ್ ಸೇರಿದಂತೆ ಯಾವುದೇ ರೀತಿಯ ಸರಕು ಸಾಗಣೆಯಾಗದಿರುವುದರಿಂದ ಜನಸಾಮಾನ್ಯರಿಗೂ ಬಿಸಿ ತಟ್ಟುವಂತಾಗಿತ್ತು.
ಲಾರಿ ಬೇಡಿಕೆಯಂತೆ ಸರ್ಕಾರ ಸರಕು ಸಾಗಾಟದಲ್ಲಿನ ಸೇವಾ ಶುಲ್ಕ ತೆಗೆದು ಹಾಕಲು ಒಪ್ಪಿಗೆ ನೀಡಿದೆ. ಆದರೆ ಡಿಸೇಲ್ ಮತ್ತು ಟಯರ್ ಬೆಲೆ ಕಡಿಮೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸರ್ಕಾರ ತಮ್ಮ ಬೇಡಿಕೆಗಳನ್ನು ಪೂರೈಸುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸುವುದಾಗಿ ಅಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ ಚರಣ್ ಸಿಂಗ್ ಹೇಳಿದ್ದಾರೆ.
|