ಮಾಹಿತಿ ತಂತ್ರಜ್ಞಾನದ ಪ್ರಮುಖ ನಗರವಾಗಿರುವ ಬೆಂಗಳೂರಿಗೂ ಕೂಡ ಎನ್‌ಎಸ್‌ಜಿ ಘಟಕ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಮಂಗಳವಾರ ದೆಹಲಿಯಲ್ಲಿ ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಅವರು ಆಗ್ರಹಿಸಿದ್ದಾರೆ.
ಬೆಂಗಳೂರು ಭಯೋತ್ಪಾದಕರ ಪ್ರಮುಖ ಗುರಿಯಾಗಿರುವುದರಿಂದ ಈ ಹಿಂದೆಯೇ ಹಲವು ಬಾರಿ ಮನವಿ ಮಾಡಿದ್ದರೂ ಕೂಡ, ಎನ್‌ಎಸ್‌ಜಿ ಘಟಕ ಸ್ಥಾಪಿಸಲು ಉದ್ದೇಶಿಸಿರುವ ಪ್ರಸ್ತಾಪದ ಪಟ್ಟಿಯಲ್ಲಿ ಬೆಂಗಳೂರು ಹೆಸರು ಕೈಬಿಟ್ಟು ಹೋಗಿರುವ ಬಗ್ಗೆ ಮುಖ್ಯಮಂತ್ರಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಮುಂಬೈ ದಾಳಿ ದೇಶಕ್ಕೆ ಒಂದು ಕಪ್ಪು ಚಕ್ಕಿಯಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಆಂತರಿಕ ಹಾಗೂ ಗಡಿಭಾಗಗಳಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸಬೇಕಿದೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. |