ಸಮಾಜವಾದಿ ಪಕ್ಷದ ನಾಯಕ, ಲೋಕಸಭಾ ಸದಸ್ಯ ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜಾಗಿರುವಂತೆಯೇ, ಇದೀಗ ಬಂಗಾರಪ್ಪ ಅವರು ಕಾಂಗ್ರೆಸ್‌ನಲ್ಲಿ ಇರೋ ಹಾಗಿದ್ದರೆ ಮಾತ್ರ ಬರಲಿ, ಇಲ್ಲದಿದ್ದರೆ ಅವರು ಆ ಪಕ್ಷದಲ್ಲಿಯೇ ಇರಲಿ ಎಂದು ಎಐಸಿಸಿ ಮಾಧ್ಯಮ ವಿಭಾಗದ ವಕ್ತಾರ ವೀರಪ್ಪ ಮೊಯ್ಲಿ ಅವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.ನವದೆಹಲಿಯಲ್ಲಿ ಟಿವಿ9 ಜತೆ ಮಾತನಾಡಿದ ಅವರು, ಬಂಗಾರಪ್ಪ ಅವರು ಈಗಾಗಲೇ ನಾಲ್ಕೈದು ಬಾರಿ ಕಾಂಗ್ರೆಸ್‌ಗೆ ಬಂದು ಹೋಗಿದ್ದಾರೆ. ಅವರು ಕಾಂಗ್ರೆಸ್‌ನಲ್ಲಿಯೇ ಉಳಿಯುವುದಾದರೆ ಬರಲಿ, ಇಲ್ಲದಿದ್ದರೆ ಅವರ ಪಕ್ಷದಲ್ಲಿಯೇ ಉಳಿಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಮ್ಮೆ ಕಾಂಗ್ರೆಸ್ ಸೇರುವುದು ಮತ್ತೊಮ್ಮೆ ಮತ್ತೊಂದು ಪಕ್ಷ ಸೇರುವುದು, ಪಕ್ಷ ಕಟ್ಟುವುದು ಇಂತಹದ್ದನ್ನೆಲ್ಲಾ ಮಾಡುವುದಾದರೆ ಕಾಂಗ್ರೆಸ್‌ಗೆ ಬರುವ ಅವಶ್ಯಕತೆ ಇಲ್ಲ. ಅಲ್ಲದೇ ಬಂಗಾರಪ್ಪ ಈಗಾಗಲೇ ಪಕ್ಷಕ್ಕೆ ಆಗಮಿಸಿದಾಗಲೂ ಕಾಂಗ್ರೆಸ್‌ಗೆ ಆನೆ ಬಲ ಬಂದಿರಲಿಲ್ಲ. ನಮ್ಮ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಇದು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ಎಂದು ತಿಳಿಸಿದ್ದಾರೆ.ಬಂಗಾರಪ್ಪ ಅವರಿಂದಲೂ ಕಾಂಗ್ರೆಸ್ ಉದ್ದಾರವಾಗಿಲ್ಲ, ಸಿದ್ದರಾಮಯ್ಯ ಅವರಿಂದಲೂ ಉದ್ದಾರವಾಗಿಲ್ಲ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ.ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ, ಸಾರೇಕೊಪ್ಪ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವಂತೆ ಕೆಪಿಸಿಸಿಗೆ ಶಿಫಾರಸು ನಿರ್ಣಯವನ್ನು ಕಳುಹಿಸಲಾಗಿತ್ತು. ಅದರಂತೆ ಸೋಮವಾರ ನಡೆದ ಆತ್ಮಾವಲೋಕನ ಸಭೆಯಲ್ಲೂ ಬಂಗಾರಪ್ಪ ಅವರ ಸೇರ್ಪಡೆಗೆ ಹಸಿರು ನಿಶಾನೆ ತೋರಿಸಲಾಗಿತ್ತು. ಏತನ್ಮಧ್ಯೆ ಮೊಯ್ಲಿ ಅವರು ಬಂಗಾರಪ್ಪ 'ಮಂಗ್ಯಾಟ' ವಿರುದ್ಧ ಕಿಡಿ ಕಾರಿದ್ದಾರೆ. |