ಕಾರಿಗೆ ಡಿಕ್ಕಿ ಹೊಡೆದ ನೆಪದಲ್ಲಿ ಚಲನಚಿತ್ರ ನಿರ್ಮಾಪಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಂಗಳವಾರ ಹೆಣ್ಣೂರು ಮುಖ್ಯರಸ್ತೆಯಲ್ಲಿ ನಡೆದಿದೆ.
ವಿಜಯನಗರದ ಸುಮುಖ್ ಟ್ರಾವೆಲ್ಸ್ ಮಾಲೀಕ ಹಾಗೂ ಹಾಲಿಡೇಸ್ಎಂಬ ಕನ್ನಡ ಚಿತ್ರ ನಿರ್ಮಿಸುತ್ತಿರುವ ಸಂತೋಷ್ ಕುಮಾರ್ ಗಾಯಗೊಂಡಿದ್ದಾರೆ.
ತಲೆ, ಬೆನ್ನಿಗೆ ತೀವ್ರ ಸ್ವರೂಪದ ಗಾಯವಾಗಿರುವ ಸಂತೋಷ್ ಈಗ ನಗರದಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್ ಹೆಣ್ಣೂರು ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಹುಳಿಮಾವು ಕಡೆ ಹೋಗಲು ತಿರುವು ಪಡೆಯಲು ಕಾರು ನಿಧಾನವಾಯಿತು. ಈ ಸಮಯದಲ್ಲಿ ಹಿಂದೆ ಬರುತ್ತಿದ್ದ ಮಾರುತಿ ಜೆನ್ ಸಂತೋಷ್ ಕಾರಿಗೆ ಡಿಕ್ಕಿ ಹೊಡೆದು ದೊಡ್ಡ ಘರ್ಷಣೆಗೆ ಕಾರಣವಾಯಿತು.
ಮಾರುತಿ ಕಾರು ಡಿಕ್ಕಿ ಹೊಡೆದಿದ್ದರಿಂದ ಹೊಸ ಹುಂಡೈ ವರ್ನ ಕಾರಿನ ಹಿಂಭಾಗ ಜಖಂಗೊಂಡಿತು. ಕೂಡಲೇ ಕೆಳಗಿಳಿದ ನಿರ್ಮಾಪಕ ಕಾರಿನ ಚಾಲಕನನ್ನು ನೋಡ್ಕೊಂಡು ಡ್ರೈವ್ ಮಾಡಕ್ಕಾಗಲ್ವ ಎಂದು ಗದರಿದರು. ಆಗ ಜೆನ್ ಕಾರಿನ ಚಾಲಕ ಕ್ಷಮೆಯಾಚಿಸಿದ. ಇದರಿಂದ ತೃಪ್ತರಾಗದ ಸಂತೋಷ್ ಮತ್ತೆ ಅವನ ಮೇಲೆ ರೇಗುತ್ತಿದ್ದಾಗ ಜೆನ್ ಕಾರಿನಿಂದ ಇಳಿದ ಒಬ್ಬಾತ ಲಾಂಗ್ ತೆಗೆದು ಇವರ ತಲೆ ಹಾಗೂ ಬೆನ್ನಿನ ಮೇಲೆ ಹಲ್ಲೆ ನಡೆಸಿದ. ಕೈಯಿಂದ ತಡೆಯಲು ಪ್ರಯತ್ನಿಸಿದಾಗ ಮೊಣಕೈಗೆ ಗಾಯಗಳಾಗಿವೆ.
ಜೆನ್ ಕಾರು ಡಿಕ್ಕಿ ಹೊಡೆದ ಸಮಯದಲ್ಲಿ ಸಂತೋಷ್ ಚಿತ್ರದ ನಿರ್ದೇಶಕ ಹರಿಪ್ರಸಾದ್ ಎಂಬುವರ ಜೊತೆ ಚಿತ್ರದ ಚಿತ್ರೀಕರಣದ ವಿಚಾರವಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. |