ವಿಧಾನಮಂಡಲದ ಪ್ರಧಾನ ಕಾರ್ಯದರ್ಶಿಗಳ ಹುದೆ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಬೆಳಗಾವಿ ಅಧಿವೇಶನದ ಕರ್ತವ್ಯಕ್ಕೆ ಬಹಿಷ್ಕಾರ ಹಾಕುವುದಾಗಿ ವಿಧಾನಮಂಡಲ ನೌಕರರು ಎಚ್ಚರಿಸಿದ್ದಾರೆ.
ಸಭೆ ಸೇರಿ ಚರ್ಚಿಸಿದ ಉಭಯ ಸದನಗಳ ನೌಕರರು ಹಂತ ಹಂತವಾಗಿ ಚರ್ಚಿಸಲು ನಿರ್ಧರಿಸಿದ್ದಾರೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜ. 7 ರಂದು ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಣೆ ಮಾಡುತ್ತೇವೆ. ಆ.9ರಂದು ಲೇಖನಿ ಸ್ಥಗಿತ ಮತ್ತು ಜ.12 ರಂದು ಉಪವಾಸ್ ಸತ್ಯಾಗ್ರಹ ನಡೆಸಲಾಗುತ್ತದೆ. ಅಂತಿಮವಾಗಿ ಬೆಳಗಾವಿ ಅಧಿವೇಶನ ಬಹಿಷ್ಕರಿಸಲಾಗುತ್ತದೆ ಎಂದು ಸಂಘದ ಸದಸ್ಯರು ವಿವರಿಸಿದರು.
ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ರದ್ದು ಮಾಡುವಂತೆ ವಿಶೇಷ ಮಂಡಳಿಗೆ ಮನವಿ ಮಾಡಲಾಗಿತ್ತು. ಆದರೆ ಮಂಡಳಿಯೂ ಈಗ ಇರುವ ಅಧಿಕಾರಿಯ ಬದಲಾಗಿ ಬೇರೊಬ್ಬರನ್ನು ನೇಮಕ ಮಾಡಲು ತೀರ್ಮಾನಿಸಿದೆ ಎಂಬ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು ಎಂದು ಆಗ್ರಹಿಸಿದರು. ಎರಡು ಸದನಗಳಲ್ಲಿ 1500 ನೌಕರರಿದ್ದಾರೆ. ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ 27 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನದೊಳಗೆ ಕೆಲವೊಂದು ಬೇಡಿಕೆಗಳನ್ನು ಈಡೇರಿಸಲು ಅವಕಾಶವಿದೆ. ಅಂತಹ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘ ಒತ್ತಾಯಿಸಿದೆ. |