ಶಾಸಕ ಜಮೀರ್ ಅಹಮದ್ ಖಾನ್, ಮಾಜಿ ಶಾಸಕ ಆರ್.ವಿ.ದೇವರಾಜ್ ಸೇರಿದಂತೆ ನಗರದ ಪ್ರಮುಖ ರಾಜಕಾರಣಿಗಳ ಮನೆ ಮೇಲೆ ಕೆಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಹಠಾತ್ ದಾಳಿ ನಡೆಸಿ,ಭಾರಿ ಮೊತ್ತದ ಚಿನ್ನಾಭರಣ,ನಗದು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ ಎದುರು ಇರುವ ದೇವರಾಜ್ ಅವರ ಮನೆ, ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿರುವ ಮಲ್ಲಿಕಾರ್ಜುನ ಹಾಗೂ ಅವರ ಬೆಂಬಲಿಗರ ಮನೆ ಮೇಲೆ ದಾಳಿ ನಡೆದಿದೆ.
ದೇವರಾಜ್ ನಿವಾಸದ ಮೇಲೆ ಸಂಜೆ 6 ಗಂಟೆ ಸುಮಾರಿಗೆ ದಾಳಿ ನಡೆದಿದೆ. ಜತೆಗೆ ಚಾಮರಾಜಪೇಟೆಯಲ್ಲಿರುವ ಬೆಂಬಲಿಗರಾದ ಲೋಕಿ ಅಲಿಯಾಸ್ ಲೋಕೇಶ್ವರ, ಪೂರ್ಣಿ, ನರಸಿಂಹ ಮೂರ್ತಿ, ಪ್ರಭು, ಗೋವಿಂದೇಗೌಡ ಸೇರಿದಂತೆ ಹತ್ತು ಜನರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಇಲ್ಲಿ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ದಾಖಲೆ ಪತ್ರಗಳು, ಚಿನ್ನಾಭರಣ ಹಾಗೂ ನಗದು ದೊರೆತಿದೆ. ಪ್ರಭು ಎಂಬುವರಿಗೆ ಸೇರಿದ ಸುಮಾರು 20 ಮನೆಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಮಲ್ಲಿಕಾರ್ಜುನ ಅವರ ಸಹಚರರಾದ ರಮೇಶ್, ಬಸವರಾಜ್ ಎಂಬುವರ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ಶಾಸಕರ ಭವನದ ಸಮೀಪದ ಹೈ ಪಾಯಿಂಟ್ ಬಳಿ ಮಲ್ಲಿಕಾರ್ಜುನ ಹೊಂದಿದ್ದ ಕಚೇರಿ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. |