'ನಿಮ್ಮನ್ನೆಲ್ಲಾ ನೊಡಿ ನನಾಗೆ ಅನಂದಾವಾಗಿದೆ. ನಿಮಾಗೆ ಹೋಸ ವರ್ಷಾದ ಶುಭಾಶಯಗಳು' ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕನ್ನಡದಲ್ಲಿ ನುಡಿದಾಗ ಸಭೆಯಲ್ಲಿ ಕರತಾಡನದೊಂದಿಗೆ ಹರ್ಷ ವ್ಯಕ್ತವಾಗಿತ್ತು. ಬಳಿಕ ಹಿಂದಿಯಲ್ಲಿ ತಮ್ಮ ಮಾತನ್ನು ಮುಂದುವರಿಸಿದ ಅವರು, ದೇಶಕ್ಕೆ ಬುದ್ಧನ ಶಾಂತಿ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಶಾಂತಿ-ಸೌಹಾರ್ದತೆಯಿಂದ ಬಾಳಬೇಕಾಗಿದೆ ಎಂದು ಹೇಳಿದರು.
ಅವರು ಸಂತರ ನಾಡಾದ ಗುಲ್ಬರ್ಗಾದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬುದ್ಧ ವಿಹಾರವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.
ಏಷ್ಯಾ ಖಂಡದಲ್ಲೇ ಅತ್ಯಂತ ಬೃಹದಾಕಾರದ ಬೌದ್ಧ ವಿಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಹಾರವನ್ನು ಇಂದು ಬೆಳಿಗ್ಗೆ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಸುಮಾರು 400ಕೆಜಿ ಪಂಚಲೋಹದ ಬುದ್ದ ವಿಗ್ರಹವನ್ನು ಪ್ರತಿಭಾ ಪಾಟೀಲ್ ಅವರು ಅನಾವರಣಗೊಳಿಸಿದರು.
ಸಂಪೂರ್ಣ ಅಮೃತಶಿಲೆಯಿಂದ ಕಂಗೊಳಿಸುತ್ತಿರುವ ಬುದ್ಧ ವಿಹಾರವನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಸಿದ್ದಾರ್ಥ ವಿಹಾರ ಟ್ರಸ್ಟ್‌ನಿಂದ ನಿರ್ಮಾಣ ಮಾಡಲಾಗಿತ್ತು.
ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲ ರಾಮೇಶ್ವರ ಠಾಕೂರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್,ಕಾಂಗ್ರೆಸ್ ಮುಖಂಡ ಧರಂಸಿಂಗ್, ಕೆಪಿಸಿಸಿ ಮಾಜಿ ಅಧ್ಯಕ್ಷ, ಸಿದ್ದಾರ್ಥ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಲಕ್ಷ್ಣಣ ಸವದಿ, ಇಕ್ಬಾಲ್ ಅಹ್ಮದ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಲ್ಲಿಕಾರ್ಜುನ ಖರ್ಗೆಯವರು ಸನ್ಮಾನಿಸಿದರು.
ಬಿಗಿ ಭದ್ರತೆ: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೇರಿದಂತೆ ಗಣ್ಯಾತೀಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ 2-3ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ ನಿಷೇಧಿಸಲಾಗಿದ್ದು, ನಗರದ ಅರ್ಧಭಾಗ ಸಂಚಾರವಿಲ್ಲದೆ ಬರೇ ಪೊಲೀಸರ ಸರ್ಪಗಾವಲು ಹಾಕಲಾಗಿದೆ. |