ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ರೈತ ಸಂಘ ಹೋರಾಟಕ್ಕೆ ಸಜ್ಜುಗೊಂಡಿದ್ದು, ಜನವರಿ 30ರಂದು ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಬೃಹತ್ ಧರಣಿ ನಡೆಸಲು ನಿರ್ಧರಿಸಿದೆ.
ಆಪರೇಷನ್ ಕಮಲದ ಕಾರ್ಯಾಚರಣೆಯಲ್ಲೇ ಸರ್ಕಾರ ಮುಳುಗಿದೆ. ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಮಟ್ಟಕ್ಕೂ ವಿಸ್ತರಣೆಗೆ ಮುಂದಾಗಿದೆ. ಇದಕ್ಕಿಂತ ನಾಚಿಕೆಗೇಡಿತನ ಮತ್ತೊಂದಿಲ್ಲ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮೊದಲ ಹಂತದ ಧರಣಿಯಲ್ಲಿ ಸುಮಾರು 30ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 9ರಂದು ಹೊಸಪೇಟೆಯಲ್ಲಿ ರೈತರ ಬೃಹತ್ ಸಮ್ಮೇಳನ ನಡೆಸಲಾಗುವುದು. ಸರ್ಕಾರದೊಂದಿಗೆ ಐದು ಸಭೆಯಲ್ಲಿ ಚರ್ಚಿಸಿದರೂ ಫಲಶ್ರುತಿ ಶೂನ್ಯ. ರೈತರ ಬೇಡಿಕೆ ಮಾತ್ರ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ಖುಷ್ಕಿ ಪ್ರದೇಶದ ರೈತರೇ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸಂಬಂಧವೂ ಕೃಷಿ ನೀತಿ ರೂಪಿಸಿಲ್ಲ, ತೋಟಗಾರಿಕಾ ಬೆಳೆಗಾರರಿಗೂ ನೀತಿ ರೂಪಿಸಿಲ್ಲ. ಅಲ್ಲದೇ ಬಳ್ಳಾರಿಯಲ್ಲಿ ಆರು ಸಾವಿರ ಹಾಗೂ ಕೊಪ್ಪಳದಲ್ಲಿ ಎಂಟು ಸಾವಿರ ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಆಪಾದಿಸಿದರು. |