ಉಪ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ವೈಯಕ್ತಿಕ ವರ್ಚಸ್ಸೇ ಕಾರಣ ಎಂದು ತೋಟಗಾರಿಕ ಸಚಿವ ಉಮೇಶ್ ಕತ್ತಿ ಹೇಳಿದ್ದಲ್ಲದೇ, ಆರು ತಿಂಗಳಲ್ಲಿ ಜೆಡಿಎಸ್ ಉತ್ತರ ಕರ್ನಾಟಕದಿಂದ ಗಂಟು ಮೂಟೆ ಕಟ್ಟಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇಲ್ಲಿಯವರೆಗೆ 7 ವಿಧಾನಸಭೆ ಚುನಾವಣೆ ಎದುರಿಸಿದ್ದೇನೆ. ಒಮ್ಮೆ ಮಾತ್ರ 421 ಮತಗಳಿಂದ ಸೋಲು ಅನುಭವಿಸಿದ್ದೇನೆ. ಐದು ಬಾರಿ ಬೇರೆ ಬೇರೆ ಚಿಹ್ನೆಯಡಿ ಸ್ಪರ್ಧಿಸಿದ್ದೇನೆ ಎಂದರು. ಜನರೊಂದಿಗೆ ತಾವು ಹೊಂದಿರುವ ಸಂಪರ್ಕ ಮತ್ತು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಕ್ರಮ ಗೆಲುವಿಗೆ ಕಾರಣ. ಯಡಿಯೂರಪ್ಪ ನಾಯಕತ್ವ ಕೂಡಾ ಸಹಕಾರಿಯಾಗಿದೆ. ಇದೆಲ್ಲಕ್ಕಿಂತ ವೈಯಕ್ತಿಕ ವರ್ಚಸ್ಸು ಗೆಲುವು ತಂದು ಕೊಟ್ಟಿದೆ ಎಂಬುದನ್ನು ಅನೇಕ ಚುನಾವಣೆಗಳು ಸಾಬೀತು ಪಡಿಸಿವೆ. ಎ.ಬಿ.ಪಾಟೀಲ್ ಸೇರಿದಂತೆ ತಮ್ಮ ವಿರುದ್ಧ ಸ್ಪರ್ಧಿಸಿದ್ದರೂ ಗೆಲುವಿನ ಅಂತರ 50 ಸಾವಿರಕ್ಕಿಂತ ಕಡಿಮೆ ಇರುತ್ತಿರಲಿಲ್ಲ ಎಂದರು. ಎಂಟು ಕ್ಷೇತ್ರಗಳ ಪೈಕಿ ಅನುಕಂಪ, ಹಣ, ಹೆಂಡದಿಂದ ಜೆಡಿಎಸ್ ಮೂರು ಕ್ಷೇತ್ರ ಗೆದ್ದಿದೆ. ಉತ್ತರ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲೂ ಠೇವಣಿ ಜಪ್ತಿಯಾಗಿ ಉತ್ತರ ಕರ್ನಾಟಕದಿಂದ ಅಪ್ಪ, ಮಕ್ಕಳು ಗಂಟು ಮೂಟೆ ಕಟ್ಟಿದ್ದಾರೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದಿಂದಲೇ ಜೆಡಿಎಸ್ ಮಾಯವಾಗುತ್ತದೆ. ಅದಕ್ಕಾಗಿ ತಮ್ಮೊಂದಿಗೆ ಮೈತ್ರಿಕೊಳ್ಳಲಿ ಎಂದು ಅಪ್ಪ-ಮಕ್ಕಳಿ ಕಾಂಗ್ರೆಸ್‌ಗೆ ಬೆದರಿಕೆ ಹಾಕುತ್ತಿರುತ್ತಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 25 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ. ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಪರೋಕ್ಷ ನೆರವು ನೀಡಿದ್ದಾರೆ ಎಂಬುದು ಸರಿಯಲ್ಲ ಎಂದರು. |