ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ದಿನನಿತ್ಯದ ವಸ್ತುಗಳ ಬೆಲೆ ಮೇಲೆ ಭಾರೀ ಪರಿಣಾಮ ಬೀರಿದ್ದು, ಜನಸಾಮಾನ್ಯರು ಕಂಗಾಲಾಗುವಂತಾಗಿದ್ದು, ಲಾರಿ ಮುಷ್ಕರ ಕಾನೂನು ಬಾಹಿರ ಎಂದು ಹೇಳಿರುವ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದು, ಅಗತ್ಯ ಬಿದ್ದರೆ ಎಸ್ಮಾ ಕಾಯ್ದೆ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರವಾಗಿದ್ದು, ಕೂಡಲೇ ಮುಷ್ಕರವನ್ನು ಕೈಬಿಡಬೇಕೆಂದು ಮನವಿ ಮಾಡಿಕೊಂಡಿರುವ ಸಚಿವರು, ಮುಷ್ಕರ ಮುಂದುವರಿಸಿದರೆ ಎಸ್ಮಾ ಕಾಯ್ದೆ ಜಾರಿ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಯಾವುದೇ ಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ದವಿದೆ ಎಂದು ಹೇಳಿದ್ದಾರೆ.
ಹಣ್ಣು, ತರಕಾರಿ, ಹೂ ಮಾರುಕಟ್ಟೆ ಮೇಲೂ ಲಾರಿ ಮುಷ್ಕರ ಗಂಭೀರ ಪರಿಣಾಮ ಬೀರಿದ್ದು, ತರಕಾರಿ ಬೆಳೆದ ರೈತರು ಮಾರಾಟಗಾರರು ಸಿಗದೆ ಪರದಾಡುವಂತಾಗಿದೆ.
ಸರ್ಕಾರ ಹಾಗೂ ಲಾರಿ ಮಾಲೀಕರ ನಡುವಿನ ಹಗ್ಗ ಜಗ್ಗಾಟದಿಂದಾಗಿ ಸಾರ್ಜಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಮಾಲೀಕರು ಮುಷ್ಕರ ನಿರತರಾದರೆ, ಮುಷ್ಕರ ನಿರತ ಲಾರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸರಕು ಸಾಗಿಸಿ ಎಂದು ಸರ್ಕಾರ ತಾಕೀತು ಮಾಡಿದೆ.
ಒಂದು ವೇಳೆ ಎಸ್ಮಾ ಜಾರಿಯಾದರೆ ರಾಜ್ಯಾದ್ಯಂತ ಮೂರುವರೆ ಲಕ್ಷ ಲಾರಿಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಪ್ರತಿಭಟಿಸುವುದಾಗಿ ರಾಜ್ಯ ಮಾಲೀಕರ ಹಾಗೂ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. |