ದಾವಣಗೆರೆಯಲ್ಲಿನ ಚರ್ಚ್ ವಿವಾದಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ನೀಡದೆ ಈ ರೀತಿ ಕೋರ್ಟ್ ಅನ್ನೇ ನಿರ್ಲಕ್ಷಿಸುವ ಜಿಲ್ಲಾಧಿಕಾರಿಗಳು ಬೇಕೆ?ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅಲ್ಲಿನ ಜಿಲ್ಲಾಧಿಕಾರಿ ಅಮರನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಪ್ರಕರಣದ ಕುರಿತು ಜಿಲ್ಲಾಧಿಕಾರಿ ಅಮರನಾರಾಯಣ ಅವರು ಬುಧವಾರ ಕೋರ್ಟ್‌ಗೆ ಗೈರುಹಾಜರಿ ಆಗುವುದರೊಂದಿಗೆ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಪೂರ್ವ ಅನುಮತಿ ಪಡೆದುಕೊಳ್ಳದೇ ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಹಾಗೂ ಇತರ ಬೇರೆ ಬೇರೆ ಕಾರಣಗಳಿಗೆ ಮುಚ್ಚಿರುವ ದಾವಣಗೆರೆಯ ಕ್ರೈಸ್ತ ಪ್ರಾರ್ಥನಾ ಮಂದಿರಗಳನ್ನು ಪುನಃ ತೆರೆಯಲು ಅಧಿಕಾರಿಗಳಿಗೆ ಆದೇಶಿಸಲು ಕೋರಿ ಅನೇಕ ಕ್ರೈಸ್ತ ಸಮುದಾಯದವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಅವರ ಗೈರು ಹಾಜರಿ ಕೋರ್ಟ್ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತ್ತು.ಅವರು ಒಂದು ಜಿಲ್ಲೆಗೆ ಅಧಿಕಾರಿಯೇ ಆಗಿರಬಹುದು, ಆದರೆ ಯಾರೂ ಕಾನೂನಿಗಿಂತ ಮೇಲಲ್ಲ, ಕೋರ್ಟ್‌ಗೆ ಬರುವ ಮಾತು ಹೋಗಲಿ, ಕೊನೆಯ ಪಕ್ಷ ಆಡ್ವೊಕೇಟ್ ಜನರಲ್ ಅವರ ಕಚೇರಿಗೆ ಹೋಗಿ ಕೂಡ ಮಾಹಿತಿ ನೀಡಿಲ್ಲ. ಇದೆಲ್ಲ ಏನು?ಅವರು ತಮ್ಮನ್ನು ಏನೆಂದು ತಿಳಿದುಕೊಂಡಿದ್ದಾರೆ ಎಂದು ನ್ಯಾಯಪೀಠ ಖಾರವಾಗಿ ತರಾಟೆಗೆ ತೆಗೆದುಕೊಂಡಿದೆ. |