ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಕಾನೂನು ಕ್ರಮ ಎದುರಿಸಲು ಸನ್ನದ್ದವಾಗಿರುವಂತೆ ರಾಜ್ಯಕ್ಕೆ ಕೇಂದ್ರ ಸೂಚನೆ ನೀಡಿದೆ.
ಲಾರಿ ಮುಷ್ಕರ ಕಾನೂನು ಬಾಹಿರವಾಗಿದ್ದು, ಕೂಡಲೇ ಮುಷ್ಕರ ನಿಲ್ಲಿಸುವಂತೆ ಸಚಿವ ಅಶೋಕ್ ತಿಳಿಸಿದ್ದರು. ಇಲ್ಲದಿದ್ದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಲಾರಿ ಮಾಲೀಕರ ಬೇಡಿಕೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟವು. ಮಾತುಕತೆ ವಿಫಲವಾಗಿರುವುದರಿಂದ ಇದೀಗ ಕೇಂದ್ರ ಎಲ್ಲ ರಾಜ್ಯಗಳಿಗೆ ಈ ಸೂಚನೆ ರವಾನಿಸಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್. ಹೇಳಿದ್ದಾರೆ.
ಮುಷ್ಕರ ನಿಭಾಯಿಸಲು ರಾಜ್ಯಮಟ್ಟದಲ್ಲಿ ಸಾರಿಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ಪ್ರತಿದಿನ ಸಭೆ ನಡೆಸಿ ಸ್ಥಿತಿ ಅವಲೋಕಿಸಲಿದೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆಗೆ ಜಿಲ್ಲಾಧಿಕಾರಿ, ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಾರಿಗೆ ಆಯುಕ್ತರ ಕಚೇರಿಯಲ್ಲಿ ದಿನವಿಡಿ ಕಾರ್ಯನಿರ್ವಹಿಸುವ ಮಾಸ್ಟರ್ ಕಂಟ್ರೋಲ್ ರೂಮ್ ಆರಂಭಿಸಲಾಗಿದೆ. ಒಬ್ಬ ಸಹಾಯಕ ಪ್ರಾದೇಶಿಕ ಅಧಿಕಾರಿ, ಒಬ್ಬ ಮೋಟಾರು ವಾಹನ ತನಿಖಾಧಿಕಾರಿ ಒಳಗೊಂಡಿರುವ ಮೂರು ತಂಡಗಳು ಕಾರ್ಯನಿರ್ವಹಿಸಲಿವೆ.
ಮುಷ್ಕರದಲ್ಲಿ ಪಾಲ್ಗೊಳ್ಳದಿರುವ ಸರಕು ಸಾಗಣೆ ವಾಹನ, ಲಾರಿಗಳ ಓಡಾಟಕ್ಕೆ ಮುಷ್ಕರ ನಿರತರು ತೊಂದರೆ ಉಂಟು ಮಾಡಿದರೆ ಅಥವಾ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಎದುರಾದರೆ ಮಾಸ್ಟರ್ ಕಂಟ್ರೋಲ್ ರೂಮ್, ಕಾರ್ಯಪಡೆಗಳಿಗೆ ಮಾಹಿತಿ ನೀಡಿದರೆ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದರು. |