ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗೂಡಿ ಹೋರಾಟ ಮಾಡದಿರುವುದೇ ಪಕ್ಷದ ಸೋಲಿಗೆ ಕಾರಣ ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿಸಿ ಪ್ರಚಾರ ನಡೆಸಿದ್ದರೆ ಉತ್ತಮ ಫಲಿತಾಂಶ ದೊರಕುತಿತ್ತು ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶೂನ್ಯ ಸಾಧನೆ ದುರದೃಷ್ಟಕರ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿಮ್ಮ ಮುಂದಿನ ಹೆಜ್ಜೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತೆ 40 ವರ್ಷಗಳ ಕಾಲ ಬ್ಲಾಕ್ ಮಟ್ಟದಿಂದ ಎಐಸಿಸಿ ಮಟ್ಟದವರೆಗೆ ಕೆಲಸ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಮುಂದುವರಿಯುತ್ತೇನೆ ಎಂದರು.
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ಗಳು ಮಾರಾಟವಾಗಿದ್ದವು ಎಂದು ಹೇಳಿದ್ದೆ, ವರಿಷ್ಠರಿಗೂ ತಿಳಿಸಿದ್ದೆ. ನನ್ನ ಹೇಳಿಕೆಯ ನಂತರ ಹಲವಾರು ಮುಖಂಡರು ಅದನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕದಲ್ಲಿಯೂ ವಿಧಾನಸಭೆ ಚುನಾವಣೆಯಲ್ಲಿ ಏನೇನು ನಡೆಯಿತು ಎಂಬುದು ನನಗೆ ಗೊತ್ತಿದೆ ಎಂದರು.
ಕೇಂದ್ರದ ನಾಯಕರಿಗೂ ನನಗೂ ಯಾವುದೇ ಸಂಘರ್ಷವಿಲ್ಲ. ನಾನು ನನ್ನದೇ ಆದ ಸಿದ್ದಾಂತಗಳಡಿ ಬೆಳೆದು ಬಂದವಳಾಗಿದ್ದೇನೆ ಎಂದರು. |