ತಮಿಳುನಾಡಿನ ದೇವರ ಮಲೆಯಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸರು ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಪಾಲಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನರಹಂತಕ ವೀರಪ್ಪನ್‌ನ ಇಬ್ಬರು ಸಹಚರರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
1993ರಲ್ಲಿ ನಡೆದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣ ಹಾಗೂ ನರಹಂತಕ ವೀರಪ್ಪನ್ ಜತೆ ಸೇರಿ ಹರಿಕೃಷ್ಣ, ಶಕೀಲ್ ಅಹಮ್ಮದ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಬಸವರಾಜು ಮತ್ತು ಈರಣ್ಣ ಅಲಿಯಾಸ್ ಬೀರಣ್ಣ ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಹರಿಕೃಷ್ಣ ಮತ್ತು ಸಬ್ ಇನ್ಸ್‌ಪೆಕ್ಟರ್ ಶಕೀಲ್ ಅಹ್ಮದ್ ಅವರ ಜತೆ ಸೇರಿ ಆನೆ ದಂತ ಖರೀದಿಸುವ ನೆಪದಲ್ಲಿ ವೀರಪ್ಪನ್ ತಂಡದ ಪ್ರಮುಖ ಸದಸ್ಯ ಗುರುನಾಥನನ್ನು ಹತ್ಯೆ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ವೀರಪ್ಪನ್ 1992ರ ಮೇ ತಿಂಗಳಲ್ಲಿ ರಾಮಾಪುರ ಪೊಲೀಸ್ ಠಾಣೆ ಮೇಲೆ ಗುಂಡಿನ ದಾಳಿ ನಡೆಸಿ ಐದು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ. ಆದರೆ ವಿಶೇಷ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದರಿಂದ ವೀರಪ್ಪನ್ ಮೋಸದಿಂದ ಹರಿಕೃಷ್ಣ, ಶಕೀಲ್ ಅಹ್ಮದ್ ಸೇರಿದಂತೆ 6ಮಂದಿಯನ್ನು ಮೀಣ್ಯಂ ಬಳಿ ಕರೆಸಿಕೊಂಡು 19932ರ ಆ.14ರಂದು ಹತ್ಯೆಗೈದಿದ್ದ.
1993ರ ಏಪ್ರಿಲ್ 9ರಂದು ಪಾಲಾರ್ ಸೇತುವೆ ಬಳಿ ವೀರಪ್ಪನ್ ನಡೆಸಿದ ಬಾಂಬ್ ಸ್ಫೋಟದಲ್ಲಿ 15ಮಂದಿ ಪೊಲೀಸ್ ಮಾಹಿತಿದಾರರು ಸೇರಿದಂತೆ 22ಮಂದಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ರಾಂಬೋ ಗೋಪಾಲಕೃಷ್ಣನ್ ತೀವ್ರವಾಗಿ ಗಾಯಗೊಂಡಿದ್ದರು. ಈ ದಾಳಿಯಲ್ಲಿ ಬಸವರಾಜು, ಬೀರಣ್ಣ ಸೇರಿದ್ದರು, ಅವರು ವೀರಪ್ಪನ್ ಗುಂಪಿನ ಸದಸ್ಯರಾಗಿದ್ದರು.
ವೀರಪ್ಪನ್‌ನ ಸಹಚರರಾಗಿದ್ದ ಇವರಿಬ್ಬರೂ ಟಾಡಾ ಆರೋಪಿಗಳಾಗಿದ್ದು, ಈ ಹಿಂದೆಯೇ ಚಾಮರಾಜನಗರ ಸತ್ರ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. |