ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ, ಐಐಟಿ ಮಂಜೂರಾತಿ ಹಾಗೂ ರಾಜ್ಯಕ್ಕೆ ಎನ್‌ಎಸ್‌ಜಿ ಘಟಕ ನೀಡದೆ ಅನ್ಯಾಯ ಎಸಗಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ವಪಕ್ಷ ಮುಖಂಡರು ಹಾಗೂ ಸಂಸತ್ ಸದಸ್ಯರ ಜಂಟಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.
ಕೇಂದ್ರದ ಈ ಅನ್ಯಾಯಗಳ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಹಾಗಾಗಿ ಹೋರಾಟದ ಸ್ವರೂಪ ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಪ್ರತಿಪಕ್ಷ ಮುಖಂಡರು ಹಾಗೂ ಸಂಸತ್ ಸದಸ್ಯರ ಸಭೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರುಗಳು ಯಾವುದೇ ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಈ ಸಚಿವರುಗಳು ಮತ್ತು ಕಾಂಗ್ರೆಸ್ ಮುಖಂಡರು ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಭಯೋತ್ಪಾದನಾ ದಾಳಿಗಳು ನಡೆಯಬಹುದು ಎಂದು ಮಾಹಿತಿ ಕಳುಹಿಸುವ ಕೇಂದ್ರ ಸರ್ಕಾರ ಎನ್‌ಎಸ್‌ಜಿ ಘಟಕ ಮಂಜೂರು ಮಾಡುವುದಿಲ್ಲ. ಅದೇ ರೀತಿ ಮಹಾರಾಷ್ಟ್ರ,ವಿದರ್ಭ ಮತ್ತು ಆಂಧ್ರದ ತೆಲಂಗಾಣಗಳಿಗೆ ಸಂವಿಧಾನದ 371ರ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡುವ ಕೇಂದ್ರ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. |