ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೇ ತಿಂಗಳು 28 ರಿಂದ ಮಾರ್ಚ್ ಕೊನೆವರೆಗೆ ಎಲ್ಲಾ ಲೋಕಸಭಾ ವ್ಯಾಪ್ತಿಯಲ್ಲಿ ಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿದೆ.
ಕಳೆದ ವಿಧಾನಸಭೆ ಉಪ ಚುನಾವಣೆ ಸೋಲು-ಗೆಲುವಿನ ಬಗ್ಗೆ ಪರಾಮರ್ಶಿಸಲು ಸೇರಿದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಸೇರಿದಂತೆ ಬಹುತೇಕ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸುಮಾರು 58 ಲಕ್ಷ ಕುಟುಂಬಗಳಿಗೆ ನೇರವಾಗಿ ಪ್ರಯೋಜನವಾಗುವ ಕಾರ್ಯಕ್ರಮ ತರಲಾಗಿದೆ. ಇದರ ಫಲಾನುಭವಿಗಳನ್ನು ಕೂಡಾ ಲೋಕಸಭೆಯಲ್ಲಿ ಮತಗಳಾಗಿ ಪರಿವರ್ತಿಸಲು ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಸಂಕ್ರಾಂತಿ ನಂತರ ಪಕ್ಷದ ಚುನಾವಣಾ ಸಮಿತಿ ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿದೆ ಎಂದ ಅವರು, ಉಪಚುನಾವಣೆಯಲ್ಲಿ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ. 3 ಕ್ಷೇತ್ರಗಳ ಸೋಲಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಒಳ ಒಪ್ಪಂದವೇ ಕಾರಣ ಎಂದರು.
|