ಆಸ್ತಿಯ ನಕಲಿ ದಾಖಲೆ ಪತ್ರ ಸೃಷ್ಟಿಸಿ ಕೊಡುತ್ತಿದ್ದ ಜಾಲವೊಂದನ್ನು ಇಲ್ಲಿನ ಸಂಪಿಗೆಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅವರು ನಗರದ ಸಿವಿಲ್ ನ್ಯಾಯಾಲಯಗಳ ಸಮುಚ್ಛಯದ ಸಮೀಪವೇ ಈ ವಂಚನೆ ಎಸಗುತ್ತಿದ್ದರು.
ಪೊಲೀಸರು ಮಾರು ವೇಷದಲ್ಲಿ ಹೋಗಿ ಈ ವಂಚನೆ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ವಿಧಾನಸೌಧದ ಸರ್ವೆ ನಂಬರ್ ಹಾಗೂ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಸರ್ವೆ ನಂಬರ್‌ಗಳಲ್ಲಿ ಆಸ್ತಿಯನ್ನು 1920ರಲ್ಲಿ ನಮ್ಮ ಹೆಸರಿಗೆ ಬರೆದುಕೊಟ್ಟಂತೆ ದಾಖಲೆ ತಯಾರಿಸಿಕೊಡಿ ಎಂದು ಕೇಳಿದರು. ತಕ್ಷಣವೇ ಆ ದಾಖಲೆ ವೇಷ ಮರೆಸಿಕೊಂಡಿದ್ದ ಪೊಲೀಸರ ಕೈ ಸೇರಿತು. ಮತ್ತೆ ತಡ ಮಾಡದ ಪೊಲೀಸರು ವಂಚಕರನ್ನು ವಶಕ್ಕೆ ತೆಗೆದುಕೊಂಡರು.
ಜಮೀನು ತಕಾರಾರೊಂದರಲ್ಲಿ ಎರಡೂ ಕಡೆಯವರು ಒಂದೇ ದಾಖಲೆ ಸಲ್ಲಿಸಿದಾಗ ಪೊಲೀಸರಿಗೆ ಅನುಮಾನ ಉಂಟಾಗಿ ಅದು ತನಿಖೆಗೆ ಪ್ರೇರಣೆಯಾಯಿತು.
ಬಿಸ್ಮಿಲ್ಲಾನಗರದ ಅಬ್ದುಲ್ ಖಾದರ್ (65), ಚುಂಚನಕಟ್ಟೆಯ ರಾಮಚಂದ್ರ (39), ಅಶ್ವಕ್(41), ಭೂಪಸಂದ್ರದ ಲಕ್ಷ್ಮೀಪತಿ(39), ಅರಖಾನ್ (59), ಜಯನಗರದ ಸೈಯದ್ ಅರಿಫ್ (42), ಕಾಮಾಕ್ಷಿಪಾಳ್ಯದ ಲಕ್ಷಂಣ್ 944) ಬಂಧಿತರು.
ಆರೋಪಿಗಳು ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಕಂದಾಯ ಇಲಾಖೆ, ಮುದ್ರಾಂಕ, ಸಮಾಜ ಕಲ್ಯಾಣ, ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಕೆಪಿಟಿಸಿಎಲ್, ಶಿಕ್ಷಣ ಇಲಾಖೆ, ಬಿಎಸ್ಎನ್ಎಲ್ ಹೀಗೆ ಅನೇಕ ಕಂಪೆನಿಗಳ ನಕಲಿ ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳ ಹಿರಿಯ-ಕಿರಿಯ ಅಧಿಕಾರಿಗಳ ನಕಲಿ ಸಹಿ ಮಾಡಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದರು. ಆರೋಪಿಗಳಿಂದ ಅಪಾರ ಪ್ರಮಾಣದ ಛಾಪಾ ಕಾಗದಗಳು, ರಾಸಾಯನಿಕ ಇತ್ಯಾದಿ ವಶಪಡಿಸಿಕೊಳ್ಳಲಾಗಿದೆ.
|