ವೇತನ ಏರಿಕೆ ಆಗ್ರಹಿಸಿ ದೇಶಾದ್ಯಂತ ತೈಲ ಕಂಪೆನಿಗಳು ನಡೆಸುತ್ತಿರುವ ಮುಷ್ಕರ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಗರಕ್ಕೂ ಬಿಸಿ ತಟ್ಟಿದ್ದು, ಪೆಟ್ರೋಲ್, ಡಿಸೇಲ್ ಇಲ್ಲದೆ ಗ್ರಾಹಕರು ಪರದಾಡುವಂತಾಗಿದೆ. ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು, ಸಾಲು ವಾಹನಗಳು ನಿಲ್ಲುವ ಮೂಲಕ ಟ್ರಾಫಿಕ್ ಜಾಮ್ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ.
ದೇಶಾದ್ಯಂತ ತೈಲ ಪೂರೈಕೆ ತೀವ್ರ ವ್ಯತ್ಯಯಗೊಂಡಿದ್ದು, ಒಂದೆರಡು ದಿನಗಳಲ್ಲಿ ಎಲ್ಲಾ ಪೆಟ್ರೋಲ್ ಪಂಪ್‌ಗಳು ತೈಲ ದಾಸ್ತಾನಿಲ್ಲ ಎಂದು ಬೋರ್ಡ್ ನೇತುಹಾಕುವ ಸಾಧ್ಯತೆ ಇದೆ. ಹೆಚ್ಚಿನೆಡೆ ನೋ ಸ್ಟಾಕ್ ನಾಮಫಲಕ ಹಾಕಿದ್ದು ಗ್ರಾಹಕರು ಕಂಗಾಲಾಗುವಂತಾಗಿದೆ.
ಕರ್ನಾಟಕ, ದೆಹಲಿ,ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಕೆಲವಡೆ ಪೆಟ್ರೋಲ್ ಪಂಪ್‌ಗಳು ವಹಿವಾಟು ಸ್ಥಗಿತಗೊಳಿಸಿವೆ. ಕರ್ನಾಟಕದಲ್ಲಿ ನಂದಿನಿ ಹಾಲು ಪೂರೈಕೆಯ ಮೇಲೂ ಈ ಮುಷ್ಕರದ ಕರಿನೆರಳು ಬೀರಿದೆ. ಕೆಎಂಎಫ್ ವಾಹನಗಳಲ್ಲಿ ಇರುವ ಇಂಧನದಲ್ಲಿ ಶುಕ್ರವಾರದವರೆಗೆ ವಾಹನಗಳ ಮೂಲಕ ಹಾಲು ಸಂಗ್ರಹ ಪೂರೈಕೆ ಮಾಡಬಹುದಾಗಿದೆ ಎಂದು ಹೇಳಿದೆ.
ವೇತನ ಏರಿಕೆ ವಿಚಾರವನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನೋಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಕೈಯಲ್ಲಿ ಏನೂ ಇಲ್ಲ ಎಂದು ಭಾರತೀಯ ತೈಲ ನಿಗಮದ ಅಧ್ಯಕ್ಷ ಸಾರ್ಥಕ್ ಬೆಹೂರಿಯಾ ತಿಳಿಸಿದ್ದಾರೆ.
ಕೊಪ್ಪಳ: ಲಾರಿ ಹಾಗೂ ತೈಲ ಕಂಪೆನಿಗಳು ನಡೆಸುತ್ತಿರುವ ಮುಷ್ಕರದ ಬಿಸಿ ಕೊಪ್ಪಳದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. |