ಆಡಳಿತಾರೂಢ ಬಿಜೆಪಿ ರಾಜ್ಯದ ನಾಶಕ್ಕೆ ಸರ್ವ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ನಡೆಯಲಿರುವ ಶೋಷಿತ ವರ್ಗಗಳ ಸಮಾವೇಶದ ಕುರಿತು ಬೆಂಗಳೂರಿನಲ್ಲಿ ಗುರುವಾರ ಸಮಾಜದ ಮುಖಂಡರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಜೆಡಿಎಸ್ ಇಂಥ ಸಮಾವೇಶ ಆಯೋಜಿಸುತ್ತಿರುವುದು ಹೊಸತಲ್ಲ. ಈ ಹಿಂದೆಯೂ ಹಲವು ಬಾರಿ ಆಯೋಜಿಸಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ ವರ್ಗಗಳ ಸಮಾವೇಶ ಕೊಪ್ಪಳದಲ್ಲಿ ನಡೆಯುತ್ತಿದೆ. ಯಾವುದೇ ವ್ಯಕ್ತಿಯ ಅಥವಾ ಸಮಾಜದ ವಿರುದ್ಧ ನಡೆಯುತ್ತಿರುವ ಸಮಾವೇಶವಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. ಕುಮಾರಸ್ವಾಮಿ ಅಥವಾ ದೇವೇಗೌಡರ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾಡುವ ಸಮಾವೇಶವೂ ಅಲ್ಲ ಎಂದರು.
ಪಕ್ಷದ ಬಲವರ್ಧನೆಗೆ ಅಗತ್ಯವಾಗಿರುವುದರಿಂದ ಈ ಸಮಾವೇಶ ನಡೆಸಲಾಗುತ್ತಿದೆ ಎಂದ ಅವರು, ಕುಮಾರಣ್ಣ ಅಂದು ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡ ಒಂದು ಸಣ್ಣ ತಪ್ಪಿನಿಂದಾಗಿ ಬಿಜೆಪಿ ಇಂದು ಈ ಮಟ್ಟಕ್ಕೇರುತ್ತಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿಯ ಕುರುಹು ಕೂಡಾ ಇರುತ್ತಿರಲಿಲ್ಲ ಎಂದು ದೇವೇಗೌಡರು ಬಿಜೆಪಿಯನ್ನು ಟೀಕಿಸಿದರು. |