ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯ ಅವರು ಭಾರತೀಯ ಜನತಾ ಪಕ್ಷ ಸೇರಲು ಆಸಕ್ತಿ ತೋರಿದಲ್ಲಿ ತಾವು ಅವರನ್ನು ಮುಕ್ತ ಮನಸ್ಸಿನಿಂದ ಬರಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಎಚ್.ಸಿ.ಶ್ರೀಕಂಠಯ್ಯನವರಂಥ ಹಿರಿಯರು ನಮ್ಮ ಪಕ್ಷವನ್ನು ಸೇರುತ್ತಾರೆಂದರೆ ಅದು ಸಂತಸದ ವಿಚಾರವೇ, ಆ ನಿಟ್ಟಿನಲ್ಲಿ ತಾನು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಅವರು ಶ್ರೀಕಂಠಯ್ಯನವರು ಬಿಜೆಪಿ ಸೇರುವುದಾಗಿ ಹಬ್ಬಿರುವ ವದಂತಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಮಾತನಾಡಿದರು.
ಅಲ್ಲದೇ ಶ್ರೀಕಂಠಯ್ಯ ಅವರೊಂದಿಗೆ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ಕೂಡ ಬಿಜೆಪಿ ಸೇರಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ತುರವೇಕೆರೆ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತಾವು ಹೇಳಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಎಂಬುದು ಶ್ರೀಕಂಠಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಂತೆ ಹಿರಿಯ ಮುಖಂಡ ಸಿದ್ದರಾಮಯ್ಯನವರನ್ನು ಕಾಂಗ್ರೆಸ್‌ನಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯೂ ಸರಿಯಾಗಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |