ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕೆಂದು ಕೇಂದ್ರ ಮತ್ತು ರಾಜ್ಯದ ಪ್ರಮುಖ ಮುಖಂಡರು ಒತ್ತಾಯಿಸುತ್ತಿರುವುದು ನಿಜ. ಆದರೆ ಈ ಬಗ್ಗೆ ಏಕಾಏಕಿ ನಿರ್ಧಾರ ಕೈಗೊಳ್ಳುವಂತಿಲ್ಲ. ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯನಾಗಿರುವುದರಿಂದ ಕೆಲವೊಂದು ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿದ ನಂತರವಷ್ಟೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳ ಒಳಗಾಗಿ ಲೋಕಸಭೆಗೆ ಚುನಾವಣೆಗಳು ನಡೆಯುವ ಸಾಧ್ಯತೆಗಳಿದ್ದು, ಅಷ್ಟರೊಳಗೆ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸುದ್ದಿಗಾರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದವರು ಬನ್ನಿ ಎಂದ ಕೂಡಲೇ ಹೋಗಲು ಸಾಧ್ಯವಾಗದು. ಸಮಾಜವಾದಿ ಪಕ್ಷದ ಸಭೆ ಕರೆದು ಅಲ್ಲಿ ತೀರ್ಮಾನ ಕೈಗೊಳ್ಳಬೇಕು. ಆನಂತರವಷ್ಟೇ ಮುಂದಿನ ನಿರ್ಧಾರ ಘೋಷಿಸುವುದಾಗಿ ಹೇಳಿದರು.
ತಾನು ಜನವರಿ 5ರಂದು ರಕ್ಷಣಾ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿದ್ದೇನೆಯೇ ಹೊರತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಪಕ್ಷ ಸೇರುವ ಸಂಬಂಧ ಚರ್ಚೆ ನಡೆಸಲು ಅಲ್ಲ ಎಂದು ಬಂಗಾರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. |