ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ ತ್ಯಾಗಮಯಿ,ಅಲ್ಲದೇ ಕಾಂಗ್ರೆಸ್ ಅನ್ನು ತಮ್ಮ ನಾಯಕತ್ವದಲ್ಲಿ ಸಮರ್ಥವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಎಸ್.ಬಂಗಾರಪ್ಪ ತಿಳಿಸಿದ್ದಾರೆ.ಮತ್ತೆ ನಾಲ್ಕನೇ ಬಾರಿಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ನಿಟ್ಟಿನಲ್ಲಿ ಸೋನಿಯಾಗಾಂಧಿ ಅವರ ಹುಕುಂಗಾಗಿ ಕಾಯುತ್ತಿರುವ ಬಂಗಾರಪ್ಪ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ,ಸೋನಿಯಾ ಗಾಂಧಿಯ ಗುಣಗಾನ ಮಾಡಿದರು.ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡ ಸಂದರ್ಭದಲ್ಲಿ ನೀವು ಇದೇ ಸೋನಿಯಾಗಾಂಧಿಯವರನ್ನು ವಿದೇಶಿ ಮಹಿಳೆ ಎಂದು ಭಾಷಣ ಬಿಗಿದಿದ್ದೀರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ,ಸೋನಿಯಾ ಅವರ ವಿದೇಶಿ ಮೂಲ ವಿವಾದ ದೀರ್ಘಕಾಲವಾದದ್ದಲ್ಲ ಎಂದು 76ರ ಹರೆಯದ ಬಂಗಾರಪ್ಪ ಸಮಜಾಯಿಷಿಕೆ ನೀಡಿದರು. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಹರಿಸಿ,ಟಿಕೆಟ್ ನೀಡಿದ್ದಲ್ಲಿ ಶಿವಮೊಗ್ಗ ಕ್ಷೇತ್ರದಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿಯೂ ಹೇಳಿದರು.ಒಂದು ವೇಳೆ ಕಾಂಗ್ರೆಸ್ ಟಿಕೆಟ್ ನೀಡಿದ್ದೇ ಹೌದಾದಲ್ಲಿ,ನಾನು ನನ್ನ ಸಾಮರ್ಥ್ಯವನ್ನು ತೋರಿಸುತ್ತೇನೆ ಹಾಗೂ ಹಿಂದುಳಿದ ನಾಯಕನ ನಾಯಕತ್ವವನ್ನು ತೋರಿಸಿಕೊಡುವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.2004 ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಬಂಗಾರಪ್ಪ, ಬಳಿಕ ಭಾಜಪದಿಂದ ಹೊರನಡೆದ ಅವರು 'ಸೈಕಲ್'(ಸಮಾಜವಾದಿ ಪಕ್ಷ)ಏರಿದ್ದರು.ಗೆಲುವಿನ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಂಗಾರಪ್ಪ 2008ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೀನಾಯ ಸೋಲು ಕಂಡಿದ್ದರು. |