ಪ್ರತಿ ನೂರು ದಿನಗಳಿಗೊಮ್ಮೆ ಸರ್ಕಾರದ ಪ್ರಗತಿ ವರದಿ ನೀಡುವ ತಮ್ಮ ಮಾತಿನಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸರ್ಕಾರದ 200 ದಿನಗಳ ಆತ್ಮಾವಲೋಕನ ಮಾಡಿಕೊಂಡರು. ಅವರ ಪ್ರಕಾರ ಇದು ನುಡಿದಂತೆ ನಡೆಯುವ ಸರ್ಕಾರ. ಪ್ರಣಾಳಿಕೆಯಲ್ಲಿ ನೀಡಿದ ಶೇ 90 ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ.ಸರ್ಕಾರ ಕಳೆದ ಡಿ.18ಕ್ಕೆ 200 ದಿನಗಳನ್ನು ಪೂರೈಸಿದ್ದು, ಉಪಚುನಾವಣೆ ಹಿನ್ನೆಲೆಯಲ್ಲಿ ವರದಿಯನ್ನು ಬಿಡುಗಡೆ ಮಾಡಿರಲಿಲ್ಲ. ಭದ್ರ ಬುನಾದಿ ಮೇಲೆ ಅಭಿವೃದ್ದಿ ಸೌಧ ಎಂಬ ಕಿರುಹೊತ್ತಿಗೆಯನ್ನು ಶುಕ್ರವಾರ ಬಿಡುಗಡೆ ಮಾಡಿದರು. ಹಲವು ಸಮಸ್ಯೆಗಳ ನಡುವೆಯೂ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಸಾಧಿಸಲಾಗಿದೆ. ಯೋಜನಾ ವೆಚ್ಚ ಕಳೆದ ಸಾಲಿಗಿಂತ ಶೇ 23 ಹೆಚ್ಚಾಗಿದ್ದರೆ, ತೆರಿಗೆ ಸಂಗ್ರಹದಲ್ಲಿ ಶೇ 12 ವೃದ್ದಿಯಾಗಿದೆ ಎಂದರು.ಯೋಜನಾ ಕಾರ್ಯಕ್ರಮಗಳ ಪ್ರಗತಿ ತೃಪ್ತಿದಾಯಕವಾಗಿದ್ದು, 2008ರ ಡಿಸೆಂಬರ್ ಅಂತ್ಯಕ್ಕೆ 9.488 ಕೋಟಿ ರೂ. ವೆಚ್ಚವಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 7,711 ಕೋಟಿ ರೂ. ಮಾತ್ರ ಖರ್ಚಾಗಿತ್ತು ಎಂದು ವಿವರಿಸಿದರು.ಆರ್ಥಿಕ ಹಿನ್ನಡೆ ಇದ್ದರೂ ಕಳೆದ ವರ್ಷಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹಿಸಲಾಗಿದೆ. ಈ ಸಾಲಿನಲ್ಲಿ 12,677 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಲಾಗಿದೆ. ಇದು ಕಳೆದ ವರ್ಷ 11,047 ಕೋಟಿ ರೂ. ಆಗಿದೆ ಎಂದರು. |