ರಾಜ್ಯದಲ್ಲಿಯೂ ಲಾರಿ ಮುಷ್ಕರ ಮುಂದುವರಿದಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಅದನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳ ನಿರ್ವಹಣೆ ಕಾಯ್ದೆ(ಎಸ್ಮಾ) ಬದಲಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಜಾರಿ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದಾಗಿ ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಎಸ್ಮಾ ಕಾಯ್ದೆಯಂತೆಯೇ, ಎನ್‌ಎಸ್ಎ ಮೂಲಕ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಮುಷ್ಕರದಲ್ಲಿ ಭಾಗವಹಿಸಿದವರನ್ನು ಬಂಧಿಸಬಹುದಾಗಿದ್ದು, ಹಾಗೆಯೇ ಪರ್ಯಾಯ ವ್ಯವಸ್ಥೆ ಕಲ್ಪಿಸಬಹುದಾಗಿದೆ ಎಂದು ವಿವರಿಸಿದರು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ವಸ್ತುಗಳು ಸೇರಿದಂತೆ ಇಂಧನ ವಿತರಣೆಗೆ ನಿಗಾ ಇಡಬೇಕು. ಆಹಾರ ಮತ್ತು ಹಾಲು ಸಾಗಣೆ, ಸಾರಿಗೆ,ಪೊಲೀಸ್ ಇತ್ಯಾದಿಗಳ ಸಲುವಾಗಿ ಲಭ್ಯ ಇರುವ ಡಿಸೇಲ್ ಮತ್ತು ಪೆಟ್ರೋಲ್‌ನಲ್ಲಿ ಶೇ.20ರಷ್ಟು ತೈಲವನ್ನು ಮೀಸಲಿಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು. |