ಹಣ ಇಲ್ಲದಿದ್ದರೂ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಪ್ರಚಾರ ಪಡೆಯುವುದು ಹಾಗೂ ಸುಳ್ಳು ಭರವಸೆ ನೀಡುವುದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ 200 ದಿನಗಳ ಸಾಧನೆ ಎಂದು ಪ್ರತಿಪಕ್ಷ ನಾಯಕ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.ಅದು ಮಾಡಿದೆ, ಇದು ಮಾಡಿದೆ ಎಂದು ಯಡಿಯೂರಪ್ಪ ಅವರು ಮಕ್ಕಳಿಗೆ ಸೈಕಲ್ ಕೊಟ್ಟಿದ್ದನ್ನೇ ದೊಡ್ಡ ಸಾಧನೆ ಎಂಬಂತೆ ಹೇಳಿಕೊಂಡು ತಿರುಗುತ್ತಿದ್ದಾರೆ. ಮುಖ್ಯ ಮಂತ್ರಿಯಾಗಿ ಮಾಡಬೇಕಾದ ಕೆಲಸಗಳನ್ನು ಸಂಪೂರ್ಣ ಮರೆತಿದ್ದಾರೆ. ಬಜೆಟ್‌ನಲ್ಲಿ ಸುಮಾರು 25 ಸಾವಿರ ಕೋಟಿ ರೂಪಾಯಿ ಹಣವನ್ನು ಅಭಿವೃದ್ದಿ ಕಾರ್ಯಗಳಿಗಾಗಿ ಒದಗಿಸಲಾಗಿತ್ತು. ಈ ಪೈಕಿ ಕೇವಲ ಶೇ. 27 ರಷ್ಟು ಮಾತ್ರ ಬಳಕೆಯಾಗಿದೆ. ಆರ್ಥಿಕ ವರ್ಷಾಂತ್ಯಕ್ಕೆ ಇನ್ನು ಎರಡು ತಿಂಗಳಷ್ಟೇ ಬಾಕಿ ಇದೆ. ಉಳಿದ ಶೇ 73 ರಷ್ಟು ಕಾರ್ಯಕ್ರಮಗಳ ಜಾರಿ ಸಾಧ್ಯವೇ? ಸರ್ಕಾರದ ಬಳಿ ಅಷ್ಟು ಹಣವಿದೆಯೇ ಎಂದು ಖರ್ಗೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ರಾಜ್ಯದ ಅಭಿವೃದ್ದಿಯನ್ನು ನಿರ್ಧರಿಸುವ ನೀರಾವರಿ, ವಿದ್ಯುತ್ ಕ್ಷೇತ್ರಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಮುಖ್ಯಮಂತ್ರಿಯಾಗಿ ಸಮರ್ಪಕ ರೀತಿಯಲ್ಲಿ ಕೆಲಸ ಮಾಡಿದ ಆತ್ಮವಿಶ್ವಾಸ ಯಡಿಯೂರಪ್ಪನವರಿಗೆ ಇದ್ದಲ್ಲಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಯಾವುದಾದರೂ ಅಭಿವೃದ್ದಿ ಕಾರ್ಯಕ್ಕೆ ಹಣ ಬಿಡುಗಡೆ ಮಾಡಲಾಗಿದೆಯೇ? ಎಂದು ಪ್ರಶ್ನಿಸಿದರು. |