ಅಪರಾಧಗಳು ಮತ್ತು ಕಾಣೆಯಾದವರ ವಿವರ ಸೇರಿದಂತೆ ಇಲಾಖೆಯ ಸಾಧನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ರಾಜ್ಯ ಪೊಲೀಸ್ ಇಲಾಖೆ ಪ್ರತ್ಯೇಕ ಟಿ.ವಿ.ವಾಹಿನಿ ಪ್ರಾರಂಭಿಸಲು ಚಿಂತನೆ ನಡೆಸಿರುವುದಾಗಿ ಪೊಲೀಸ್ ಆಯುಕ್ತ ಶಂಕರ ಬಿದರಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಿದ್ದಾರೆ.
ಕಾಣೆಯಾದವರ ಸಂಪೂರ್ಣ ಮಾಹಿತಿ ನೀಡಿ, ಸಾರ್ವಜನಿಕರ ಸಹಕಾರ ಪಡೆಯುವ ಉದ್ದೇಶದಿಂದ ಟಿ.ವಿ.ವಾಹಿನಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಅಪರಾಧಗಳ ಪತ್ತೆ ಹಾಗೂ ಇಲಾಖೆಯ ಸಾಧನೆಯನ್ನು ಪ್ರತಿಬಿಂಬಿಸಲು ಈ ಮಾಧ್ಯಮವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಕಾಣೆಯಾದವರ ಪತ್ತೆಗೆ ಪೊಲೀಸ್ ಇಲಾಖೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ನ್ಯಾಯಾಲಯಕ್ಕೆ ಹಾಜರಾಗಿ ವಿವರ ನೀಡುವಂತೆ ವಿಭಾಗೀಯ ಪೀಠ ಸೂಚಿಸಿತ್ತು.
ಕಾಣೆಯಾದವರ ಪತ್ತೆಗೆ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ. ಶೇ 85 ರಷ್ಟು ಕಾಣೆಯಾದ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಶೇ 15 ರಷ್ಟು ಪ್ರಕರಣಗಳನ್ನು ಪತ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾಧ್ಯಮಗಳ ಮೂಲಕ ಕಾಣೆಯಾದವರ ಭಾವಚಿತ್ರ ಹಾಗೂ ವಿವರಗಳನ್ನು ಪ್ರಕಟಿಸಲಾಗುತ್ತದೆ. ನಗರ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಕಾಣೆಯಾದವರ ಮಾಹಿತಿ ಘಟಕ ತೆರೆಯಲಾಗಿದೆ. ರಾಜ್ಯ ಹಾಗೂ ದೇಶದ ಇತರ ಠಾಣೆಗಳಿಗೂ ಕಾಣೆಯಾದವರ ವಿವರ ಕಳುಹಿಸಿ ಅವರ ಪತ್ತೆಗೆ ಇಲಾಖೆ ಶ್ರಮಿಸುತ್ತಿದೆ ಎಂದರು.
|