ಇನ್ನು ಮುಂದೆ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳುವವರಿಗೆ ರಾಜಾತಿಥ್ಯ ನೀಡುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವವರಿಗೆ ಯಾವುದೇ ಹುದ್ದೆ ಇಲ್ಲ, ಪಕ್ಷದ ತತ್ವ, ಅಭಿವೃದ್ಧಿ, ಸಾಧನೆಗಳನ್ನು ಮೆಚ್ಚಿ ಸೇರುವುದಾದರೆ ಅಂತಹವರನ್ನು ಸ್ವಾಗತಿಸುವುದಾಗಿ ಹೇಳಿದರು.
ಆದರೆ ಯಾವುದೇ ಸ್ಥಾನಮಾನದ ಭರವಸೆ ನೀಡಿ ಸೇರ್ಪಡೆಗೊಳಿಸುವ ಪ್ರಶ್ನೆಯೇ ಇಲ್ಲ ಎಂದ ಅವರು, ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ದುಡಿಯುವುದಾದರೆ ಸೇರಲಿ ಎಂದರು.
ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವ ನಿಟ್ಟಿನಲ್ಲಿ ಆಪರೇಶನ್ ಕಮಲ ನಡೆಸುವ ಮೂಲಕ ಯಶಸ್ವಿಯಾಗಿದ್ದೇವೆ. ಆ ನಿಟ್ಟಿನಲ್ಲಿ ಮತ್ತೆ ಅಂತಹ ತಂತ್ರಗಾರಿಕೆಯನ್ನು ಮುಂದುವರಿಸುವುದಾಗಲಿ, ಹುದ್ದೆಯ ಆಶ್ವಾಸನೆ ನೀಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. |