ಮಾಜಿ ಪ್ರಧಾನಿ ದೇವೇಗೌಡರು ಯಾವತ್ತೂ ಹಿಂದುಳಿದ ವರ್ಗದ ನಾಯಕರಾಗಿದ್ದವರೇ ಅಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜೆಡಿಎಸ್‌ನಲ್ಲಿದ್ದ ಸಂದರ್ಭದಲ್ಲಿ ಅಹಿಂದ ಸಮಾವೇಶದಲ್ಲಿ ಭಾಗವಹಿಸಿದ ಕಾರಣಕ್ಕೆ ನಮ್ಮನ್ನೆಲ್ಲ ಹೊರ ಹಾಕಿದ ಗೌಡರು ಇದೀಗ ಏಕಾಏಕಿ ಶೋಷಿತ ವರ್ಗಗಳ ಸಮಾವೇಶ ಮಾಡಲು ಹೊರಟಿರುವುದು ಬೂಟಾಟಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಜೆಡಿಎಸ್ ಗೆದ್ದುಕೊಂಡ ನಂತರ, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಶೋಷಿತ ವರ್ಗಗಳ ಸಮಾವೇಶವನ್ನು ಕೊಪ್ಪಳದಲ್ಲಿ ನಡೆಸುವುದಾಗಿ ದೇವೇಗೌಡರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಗೌಡರು ಹಿಂದುಳಿದ ವರ್ಗಗಳ ಪೀಡಕರೇ ವಿನಃ, ನಾಯಕರಾಗಿ ಎಂದೂ ಅವರು ರೂಪುಗೊಂಡಿಲ್ಲ. ಆ ನಿಟ್ಟಿನಲ್ಲಿ ಶೋಷಿತ ವರ್ಗಗಳ ಸಮಾವೇಶ ನಡೆಸಲು ಹೊರಟಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ ಎಂದು ಅವರು ಕುಹಕವಾಡಿದ್ದಾರೆ.
ಜನತಾಪರಿವಾರ ಇರಲಿ, ಜೆಡಿಎಸ್‌ನಲ್ಲಾಗಲಿ ಗೌಡರು ಹಿಂದುಳಿದ ವರ್ಗಗಳ ಅಭಿವೃದ್ದಿಯ ಬಗ್ಗೆ ಪ್ರತಿಪಾದನೆ ಮಾಡಿದವರೇ ಅಲ್ಲ ಎಂದು ಹರಿಹಾಯ್ದಿರುವ ಅವರು, ಶೋಷಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಹೇಳಿದ್ದಾರೆ. |