ಮಹದೇವಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಚೆಕ್ ಡಿಸ್ಕೌಂಟ್ ಅಂಗಡಿಯ ನೌಕರನಿಗೆ ರಿವಾಲ್ವರ್ ತೋರಿಸಿ ಕೈಕಾಲು ಕಟ್ಟಿ ಹಾಕಿ ಹಾಡುಹಗಲೇ 11 ಲಕ್ಷ ರೂ. ದರೋಡೆ ಮಾಡಿದ್ದಾರೆ.
ಇಲ್ಲಿನ ಗರುಡಾಚಾರ್ ಪಾಳ್ಯದ ಬಾಲರಾಜ್ ಅವರ ಅಂಗಡಿಯಲ್ಲಿ ಶನಿವಾರ ಈ ಘಟನೆ ನಡೆದಿದೆ. ನಾರಾಯಣಸ್ವಾಮಿ (25) ಅಂಗಡಿಯಲ್ಲಿದ್ದ ನೌಕರ. ಈತ ಬೆಳಗ್ಗೆ ಮಿನರ್ವ ವೃತ್ತದಲ್ಲಿರುವ ಕೆನರಾ ಬ್ಯಾಂಕಿನಿಂದ ಅಂಗಡಿಯ ಲೆಕ್ಕದಲ್ಲಿ 11 ಲಕ್ಷ ರೂ. ಡ್ರಾ ಮಾಡಿಕೊಂಡು ಮಹದೇವಪುರಕ್ಕೆ ತೆರಳಿದ. ಅಂಗಡಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮೂವರು ವ್ಯಕ್ತಿಗಳು ಗ್ರಾಹಕರಂತೆ ಅಂಗಡಿಯೊಳಗೆ ಬಂದರು.
ಅಂಗಡಿಯೊಳಗೆ ನುಗ್ಗಿದ ದರೋಡೆಕೋರರು ಗಾಜಿನ ಬಾಗಿಲು ಭದ್ರಪಡಿಸಿಕೊಂಡು ನಾರಾಯಣಸ್ವಾಮಿಗೆ ರಿವಾಲ್ವರ್ ತೋರಿಸಿ ಕಿರುಚಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ಆತನ ಕೈಕಾಲು ಕಟ್ಟಿಹಾಕಿ 11 ಲಕ್ಷ ರೂ. ದೋಚಿದ್ದಾರೆ. ಕೃತ್ಯ ಎಸಗಿದ ನಂತರ ಬಾಗಿಲು ಮುಚ್ಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
|