ನಿನ್ನೆ ತಂಡವೊಂದು ಸುರತ್ಕಲ್ ಸಮೀಪದ ಕೃಷ್ಣಾಪುರ ಬಳಿ ದಾಳಿ ಮಾಡಿ ಯುವಕನೊಬ್ಬನನ್ನು ಹತ್ಯೆಗೈದ ನಂತರ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ, ರಾತ್ರಿ ವೇಳೆ ಸುರತ್ಕಲ್‌ನಲ್ಲಿ ಮತ್ತೊಬ್ಬ ಯುವಕನಿಗೆ ಇರಿದ ಪ್ರಕರಣ ವರದಿಯಾಗಿದೆ. ನಗರದಲ್ಲಿ ಭಾರೀ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ. ಗಲಭೆಗೆ ಸಂಬಂಧಿಸಿದಂತೆ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದ್ದು, ಭಾನುವಾರ ಸಂಜೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿಸಭೆ ನಡೆಯಲಿದೆ.
ಕೃಷ್ಣಾಪುರದಲ್ಲಿ ಆರಂಭವಾದ ಗಲಭೆ ಸುರತ್ಕಲ್‌ವರೆಗೂ ವ್ಯಾಪಿಸಿದ್ದು, ನಿನ್ನೆ ರಾತ್ರಿ ಸುರತ್ಕಲ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿನೋದ್ ಎಂಬಾತನಿಗೆ ಆರು ಜನರ ತಂಡವೊಂದು ಹಿಂದಿನಿಂದ ಬಂದು ಇರಿದ ಕಾರಣ ಗಂಭೀರ ಗಾಯಗೊಂಡ ಆತನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಪೊಲೀಸರು ಈ ವಿಚಾರವನ್ನು ದೃಢಪಡಿಸಿಲ್ಲ. ಈ ಹಿನ್ನಲೆಯಲ್ಲಿ ಮಂಗಳೂರು ತಾಲೂಕಿನಾದ್ಯಂತ ಬಿಗಿ ಭದ್ರತೆಯನ್ನು ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚೆರಿಕೆ ವಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ಕೃಷ್ಣಾಪುರ 4ನೇ ಬ್ಲಾಕ್‌ನ ಮುಖ್ಯ ರಸ್ತೆಯಲ್ಲಿ ಯುವಕನೊಬ್ಬನ ಮೇಲೆ ದಾಳಿ ನಡೆಸಿ ಹತ್ಯೆಗೈದಿತ್ತು. ಸಾವನ್ನಪ್ಪಿದನನ್ನು ಕಾಟಿಪಳ್ಳ ನಿವಾಸಿ, ಇಲ್ಲಿನ ಕಾಲೇಜಿನ ವಿದ್ಯಾರ್ಥಿ ತಂಜೀಮ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಮತ್ತೊಬ್ಬ ರೆಹಮತುಲ್ಲಾ ಎಂಬವನು ಗಾಯಗೊಂಡಿದ್ದಾನೆ. ಹಿಂದೂ ಸಂಘಟನೆಯ ಮುಖಂಡ ಉದಯ ಪೂಜಾರಿ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದು ಇತ್ತೀಚೆಗಷ್ಟೇ ನಿರ್ದೋಷಿ ಎಂದು ಬಿಡುಗಡೆಯಾದವನು. ಹಲ್ಲೆ ನಡೆಸಿದವರು ಈತನ ಪರಿಚಿತರು ಎಂದು ಶಂಕಿಸಲಾಗಿದೆ.
ಇದರ ನಂತರ ಸುರತ್ಕಲ್ ಆಸುಪಾಸಿನಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿವೆ. ಹಲವಾರು ಬಸ್ಸು, ಮನೆಗಳು, ಅಂಗಡಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ಹಾನಿಯೆಸಗಲಾಗಿದ್ದು ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸುರತ್ಕಲ್, ಕಾಟಿಪಳ್ಳ, ಕುಳಾಯಿ, ಕೃಷ್ಣಾಪುರ, ಫರಂಗಿಪೇಟೆ, ಬಿಸಿ ರೋಡ್ ಮುಂತಾದೆಡೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
|