ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಲು ಸದ್ಯದಲ್ಲಿಯೇ ಪಕ್ಷಾತೀತವಾಗಿ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಾರಾಹಿ ಜಲವಿದ್ಯುತ್ ಯೋಜನೆ ಎರಡನೇ ಹಂತದ ಘಟಕಗಳಿಗೆ ಶನಿವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ವಿದ್ಯುತ್ ಬೇಡಿಕೆಗಾಗಿ ಸರ್ಕಾರ ಪ್ರತಿ ದಿನ 9 ಕೋಟಿ ರೂ. ವೆಚ್ಚ ಮಾಡುತ್ತಿದೆ. ವಾರಾಹಿ ಎರಡನೇ ಹಂತದ ಯೋಜನೆಯಿಂದ ಸರ್ಕಾರಕ್ಕೆ 1.25 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ 8930 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, 1700 ಮೆ.ವ್ಯಾ ವಿದ್ಯುತ್ ಕೊರತೆ ಇದೆ. ಆದ್ದರಿಂದ ಮುಂದಿನ 50 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.
ಪರಿಸರವಾದಿಗಳು ನೀರು ಮತ್ತು ವಿದ್ಯುತ್ ಅಗತ್ಯತೆಯನ್ನು ಅರಿತುಕೊಳ್ಳಬೇಕು. ವಿದ್ಯುತ್ ಇಲ್ಲದೇ ರಾಜ್ಯದ ಅಭಿವೃದ್ದಿಯೇ ಅಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಿಸುವುದಿಲ್ಲ ಹಾಗೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
|