ಬಳ್ಳಾರಿ ಗಣಿಧಣಿಗಳು ಸೇರಿದಂತೆ ಕೆಲವು ಬಿಜೆಪಿ ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸಿನ ಹಿರಿಯ ನಾಯಕರು ನೇರವಾಗಿ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮೊದಲಾದವರನ್ನೊಳಗೊಂಡ ನಿಯೋಗ ಶನಿವಾರ ಗೃಹ ಕಚೇರಿ ಕೃಷ್ಣಾಗೆ ತೆರಳಿ ದೂರು ನೀಡಿದೆ.
ಇದೇ ರೀತಿ ದ್ವೇಷದ ರಾಜಕಾರಣ ಮುಂದುವರೆದರೆ ಮುಂಬರುವ ವಿಧಾನ ಮಂಡಲದ ಅಧಿವೇಶನದ ಒಳಗೆ ಹಾಗೂ ಹೊರೆಗೆ ಹೋರಾಟ ನಡೆಸಬೇಕಾದೀತು ಎಂದೂ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರ ದೂರುಗಳನ್ನು ಶಾಂತಚಿತ್ತವಾಗಿ ಆಲಿಸಿದ ಮುಖ್ಯಮಂತ್ರು ಯಡಿಯೂರಪ್ಪ, ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳುವ ಸ್ಪಷ್ಟ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.
ತಮ್ಮ ದೂರಿನಲ್ಲಿ ವಿಶೇಷವಾಗಿ ಬಳ್ಳಾರಿಯ ಗಣಿ ಧಣಿಗಳಾಗಿರುವ ಸಚಿವ ಜನಾರ್ದನ ರೆಡ್ಡಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಧಿಕಾರಿಗಳು ಸಚಿವರ ಒತ್ತಡಕ್ಕೆ ಒಳಗಾಗಿ ಗಣಿ ಮಾಲೀಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ನ್ಯಾಯಾಲಯಗಳಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
|