ಹುಬ್ಬಳ್ಳಿ ನ್ಯಾಯಾದಲ್ಲಿನ ಬಾಂಬ್ ಸ್ಫೋಟ, ಧಾರವಾಡ ಸಮೀಪದ ವೆಂಕಟಾಪುರ ಗ್ರಾಮದ ಬಳಿ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್ ಹುದುಗಿಸಿಟ್ಟ ಪ್ರಕರಣ, ಹಲವಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಬಂಧಿತರಿಂದ 11.08ಲಕ್ಷ ನಗದು ಹಣ, ಬಂಗಾರ,ಬೆಳ್ಳಿ, ಮೋಟಾರ್ ಸೈಕಲ್, ಮಾರಕಾಸ್ತ್ರ,ಗನ್‌ಪೌಡರ್, ಜಂಬಗಿಯ ಹುಬ್ಬಳಿಯ ಮನೆಯಲ್ಲಿ ಸಜೀವ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀಳಗಿ ಕ್ರಾಸ್‌ನ ನಿವಾಸಿ ನಾಗರಾಜ(24)ಎಂಬಾತ ಎಲ್ಲ ಪ್ರಕರಣಗಳ ರೂವಾರಿಯಾಗಿದ್ದು, ಆರೋಪಿಗಳ ಬಂಧನದಿಂದ ಬೆಳಗಾವಿ, ವಿಜಾಪುರ, ಹುಬ್ಬಳ್ಳಿ, ಧಾರವಾಡ ಮತ್ತು ಬಾಗಲಕೋಟೆಗಳಲ್ಲಿ ನಡೆದ ಅನೇಕ ಪ್ರಕರಣಗಳ ರಹಸ್ಯ ಬಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆ ಹಾಗೂ ಸುಲಿಗೆ ನಡೆಸುವ ಮೂಲಕ ಭೂಗತ ಜಗತ್ತನ್ನು ಆಳಲು ಉದ್ದೇಶಿಸಿದ್ದ ಎಂಟು ಜನರ ತಂಡ ಈ ಕೃತ್ಯ ಎಸಗಿದೆ ಎಂದು ಉತ್ತರ ವಲಯದ ಐಜಿಪಿ ರಾಘುವೇಂದ್ರ ಔರಾದಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ನಾಗರಾಜ ಜಂಬಗಿ ನೇತೃತ್ವದ ತಂಡ ತನ್ನ ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ವಿರೋಧಿ ಗುಂಪಿನ ಸದಸ್ಯರನ್ನು ಗುರಿಯಾಗಿರಿಸಿಕೊಂಡು ಮೇ 2008ರಲ್ಲಿ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟಿಸಿತ್ತು.
ಈ ಪ್ರಕರಣದಲ್ಲಿ ಉದ್ದೇಶ ಈಡೇರದಿರುವುದರಿಂದ ನಿರಾಶೆಗೊಂಡ ತಂಡವು, ಧಾರವಾಡ ಸಮೀಪದ ವೆಂಕಟಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ -4ರ ಸೇತುವೆ ಕೆಳಗೆ ಬಾಂಬ್‌ಗಳನಿಟ್ಟು ಗಣ್ಯ ವ್ಯಕ್ತಿಗಳನ್ನು ಹತ್ಯೆಗೈಯಲು ಉದ್ದೇಶಿಸಿತ್ತು ಎಂದು ತಿಳಿಸಿದ್ದಾರೆ. |