ಉಪಚುನಾವಣೆ ಯಶಸ್ಸಿನ ಬೆನ್ನತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ಸ್ಪರ್ಧಿಸುವ ಕುರಿತು ಯೋಚಿಸಿರಲಿಲ್ಲ. ಪಕ್ಷ ಬಯಸಿದರೆ ರಾಷ್ಟ್ರ ಮಟ್ಟದ ರಾಜಕಾರಣ ಪ್ರವೇಶಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ. ಕನಕಪುರ ಕ್ಷೇತ್ರದಿಂದ 1996ರಲ್ಲಿ ಜಯಗಳಿಸುವ ಮೂಲಕ ಕುಮಾರಸ್ವಾಮಿ ತಮ್ಮ ರಾಜಕೀಯ ಜೀವನ ಆರಂಭಿಸಿದರು.
ಬಿಜೆಪಿ ಸರ್ಕಾರ 200 ದಿನ ಪೂರೈಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜನಪರವಾಗಿರುವ ಭರವಸೆ ನೀಡಿದ ಪಕ್ಷ ಈಗ ಊಳಿಗಮಾನ್ಯ ಪದ್ಧತಿ ಅನುಸರಿಸುತ್ತಿದೆ. ಯಡಿಯೂರಪ್ಪ ಸಂಪುಟದ ಸಚಿವರ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ ಎಂದು ಆಪಾದಿಸಿದರು.
ಸ್ಪಷ್ಟನೆಗೆ ಸೂಚನೆ: ಗ್ರಾಮೀಣ ಮತ್ತು ಪಂಚಾಯತ್‌ರಾಜ್ ಸಚಿವೆ ಶೋಭಾ ಕರಂದ್ಲಾಜೆ ಕುರಿತು ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ವ್ಯಕ್ತಪಡಿಸಿರುವ ಸಂಶಯಗಳನ್ನು ಸರ್ಕಾರ ನಿವಾರಿಸಬೇಕು ಎಂದರು. ಕಂದಾಯ ನಿವೇಶನ ಸಕ್ರಮಗೊಳಿಸುವ ಕುರಿತು ಶೋಭಾ ಕರಂದ್ಲಾಜೆ ನೀಡಿದ ಸಚಿವ ಸಂಪುಟದ ವಿವರ ದಾರಿ ತಪ್ಪಿಸುವಂತಹುದು ಎಂದು ಶನಿವಾರ ಕಂದಾಯ ಸಚಿವ ಕರುಣಾಕರ ರೆಡ್ಡಿ ಹೇಳಿದ್ದರು.
ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿ ಪ್ರಸ್ತಾಪಿಸಿದ ಅವರು ಲೋಕಾಯುಕ್ತ ಯಡಿಯೂರಪ್ಪ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಒಡೆತನದ ಗಣಿ ಕಂಪೆನಿಗಳಿಗೆ ಕಡಿವಾಣ ಹಾಕುವ ಧೈರ್ಯ ಪ್ರದರ್ಶಿಸಬೇಕು ಎಂದು ಸವಾಲು ಹಾಕಿದರು. |