ಎಸ್ಮಾ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ವಾಪಸ್ ಪಡೆಯಬೇಕು, ಬಂಧಿಸಿರುವ ಮುಖಂಡರನ್ನು ಬಿಡುಗಡೆ ಮಾಡಬೇಕು. ಹಾಗಿದ್ದರೆ ಮಾತ್ರ ಮಾತುಕತೆಗೆ ಬರಲು ಸಿದ್ಧ ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಫೋರ್ಟ್ ಕಾಂಗ್ರೆಸ್ ಪಟ್ಟು ಹಿಡಿದಿದೆ.
ಲಾರಿ ಮುಷ್ಕರ ಸೋಮವಾರಕ್ಕೆ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಕೇಂದ್ರ ಸರ್ಕಾರ ಕರೆದಿರುವ ಮಾತುಕತೆ ವಿಫಲವಾದರೆ ಪರಿಸ್ಥಿತಿ ಗಂಭೀರವಾಗಲಿದೆ. ಬಂಧಿಸಿರುವ ನಾಯಕರನ್ನು ಬಿಡುಗಡೆ ಮಾಡುವುದಾಗಿ ಭರವಸೆ ಸಿಕ್ಕಿದೆ. ಆದ್ದರಿಂದ ಮಾತುಕತೆಗೆ ಸಿದ್ಧರಾಗಿದ್ದೇವೆ. ಒಂದು ವೇಳೆ ನಾಯಕರ ಬಿಡುಗಡೆಯಾಗದಿದ್ದರೆ ಮಾತುಕತೆ ಇಲ್ಲ. ಮುಷ್ಕರ ಮುಂದುವರಿಯಲಿದೆ ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಫೋರ್ಟ್ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ಈಗಾಗಲೇ ನಗರದಲ್ಲಿ ಸರಕು ಸಾಗಾಣಿಕೆ ಸ್ಥಗಿತಗೊಂಡಿದೆ. ಆಹಾರ ಧಾನ್ಯ ಬೇಳೆಕಾಳುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈಗಾಗಲೇ ದಾಸ್ತಾನು ಮುಗಿದಿದ್ದು, ಮುಷ್ಕರ ಮುಂದುವರಿದರೆ ಜನಸಾಮಾನ್ಯರು ಮತ್ತಷ್ಟು ಪರದಾಡುವಂತಾಗಲಿದೆ.
ಲಾರಿ ಮುಷ್ಕರದಿಂದಾಗಿ ಸ್ಥಗಿತವಾಗಿರುವ ದಿನ ನಿತ್ಯದ ವಸ್ತುಗಳ ಪೂರೈಕೆಗೆ ಸರ್ಕಾರಿ ಬಸ್‌ಗಳನ್ನು ಉಪಯೋಗಿಸಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ರಾಜ್ಯದ 20 ಸಾವಿರ ಕೆಎಸ್ಆರ್‌ಟಿಸಿ ಬಸ್‌ಗಳ ಹಿಂದಿನ ಮೂರು ಸೀಟುಗಳನ್ನು ಆಹಾರಧಾನ್ಯ ಹಾಗೂ ಅಗತ್ಯ ವಸ್ತುಗಳ ಸಾಗಣೆಗಾಗಿ ಉಪಯೋಗಿಸಲಾಗುವುದು ಎಂದರು.
|