ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಮತ್ತು ಗುಣಮಟ್ಟ ಪರಿಶೀಲನೆಯನ್ನು ಭಾನುವಾರ ಸ್ವತ: ಸಿಎಂ ನಡೆಸಿದ್ದಾರೆ. ಇನ್ನೂ ಮುಂದೆ ಪ್ರತಿ ಭಾನುವಾರ ನಗರ ಪ್ರದಕ್ಷಿಣೆ ನಡೆಯಲಿದೆ ಎಂದು ಸಿಎಂ ತಿಳಿಸಿದ್ದಾರೆ. ಆದರೆ ನಗರ ಪ್ರದಕ್ಷಿಣೆ ವೇಳೆ ಸಂಚಾರ ದಟ್ಟಣೆಯ ಬಿಸಿ ಸಿಎಂ ಅವರಿಗೂ ತಟ್ಟಿತು.
ಮುಖ್ಯಮಂತ್ರಿಗಳ ಕಾರ್ಯಕ್ರಮ ಆಗಾಗ ಪರಿಷ್ಕರಣೆಯಾಗುತ್ತಲೇ ಇತ್ತು. ಗೃಹ ಕಚೇರಿ ಕೃಷ್ಣಾದಿಂದ ಬೆಳಗ್ಗೆ 8.20ಕ್ಕೆ ಹೊರಡುವ ತನಕವೂ ಸಂಚಾರ ಪೊಲೀಸರಿಗೆ ಸಿಎಂ ಪಯಣಿಸುವ ಮಾರ್ಗದ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಸಿಎಂ ಸವಾರಿ ಅರಮನೆ ರಸ್ತೆ, ಓಕಳೀಪುರ ಬಳಿ ಕೆಲಕ್ಷಣ ನಿಲ್ಲಬೇಕಾಯಿತು ನಂತರ ಎಲ್ಲಿಯೂ ಮುಖ್ಯಮಂತ್ರಿಗೆ ಈ ಸಮಸ್ಯೆ ಎದುರಾಗಲಿಲ್ಲ. ಆದರೆ ಮುಖ್ಯಮಂತ್ರಿಗಾಗಿ ಎಲ್ಲ ಸಿಗ್ನಲ್‌ಗಳಲ್ಲಿ ಕಿ.ಮೀ ಗಟ್ಟಲೆ ವಾಹನಗಳು ನಿಂತಿದ್ದು ಕಂಡುಬಂತು.
ಯಾರೂ ಕಾರು ತರಬೇಡಿ, ಎಲ್ಲರೂ ನನ್ನೊಂದಿಗೆ ಬಸ್‌ನಲ್ಲಿ ಬನ್ನಿ ಎಂದು ಮುಖ್ಯಮಂತ್ರಿ ಹುಕುಂ ಹೊರಡಿಸಿದ್ದರು. ಸಚಿವರಾದ ರಾಮಚಂದ್ರ ಗೌಡ, ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಂಸದ ಅನಂತ್ ಕುಮಾರ್ ಕೆಲವಯ ಶಾಸಕರು ಸಿಎಂ ಪ್ರಯಾಣಿಸುತ್ತಿದ್ದ ಮಿನಿ ಬಸ್‌ನಲ್ಲಿದ್ದರು. ಅಧಿಕಾರಿಗಳಿಗಾಗಿ ಪ್ರತ್ಯೇಕ ಮಿನಿಬಸ್ ಮಾಡಲಾಗಿತ್ತು.
ನಮ್ಮ ಬೆಂಗಳೂರು ಎಂಬ ವೆಬ್‌ಸೈಟ್ ರಚಿಸಿ ಅದರ ಮೂಲಕ ನಗರದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳ ವಿವರವನ್ನು ನಾಗರಿಕರಿಗೆ ನೀಡಲಾಗುವುದು. ಸಲಹೆ, ಸೂಚನೆ ನೀಡಲು ಅಲ್ಲಿ ಅವಕಾಶ ಕಲ್ಪಿಸಲಾಗುವುದು. ವೆಬ್‌ಸೈಟ್ ರಚನೆ, ನಿಯಮಿತವಾಗಿ ಅಪ್‌ಡೇಟ್ ಮಾಡುವ ಕಾರ್ಯ ಅಬೈಡ್ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. |