ಲಂಚ ಕೇಳಿದ ಪೊಲೀಸರನ್ನು ತಮ್ಮ ಬಲೆಗೆ ಕೆಡವಿಕೊಳ್ಳಲು ತೆರಳಿದ ಲೋಕಾಯುಕ್ತರಿಗೆ ಮೂವರು ಪೊಲೀಸರು ಚಳ್ಳೆಹಣ್ಣು ತಿನ್ನಿಸಿದ ಘಟನೆ ವರದಿಯಾಗಿದೆ.
ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಪೇದೆಗಳಾದ ಅರುಣ್ ಕುಮಾರ್, ರಮೇಶ್ ಹಾಗೂ ರಾಜ್ ಕುಮಾರ್ ಎಂಬ ಪೊಲೀಸ್ ಕಾನ್‌ಸ್ಟೇಬಲ್‌ಗಳು ಲೋಕಾಯುಕ್ತರಿಗೆ ಪಂಗನಾಮ ಹಾಕಿದ ವ್ಯಕ್ತಿಗಳಾಗಿದ್ದಾರೆ.
ಧನಂಜಯ ಎಂಬುವರ ಸ್ನೇಹಿತ ಉಮೇಶ್ ವಂಚನೆ ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ಅವರನ್ನು ಬಿಡುಗಡೆ ಮಾಡಲು 24 ಸಾವಿರ ರೂ. ಲಂಚ ನೀಡಬೇಕೆಂದು ಪೊಲೀಸರು ಬೇಡಿಕೆ ಇಟ್ಟಿದ್ದರು. ಕೂಡಲೇ ಧನಂಜಯ ಲೋಕಾಯುಕ್ತರಿಗೆ ದೂರು ನೀಡಿದರು. ಲೋಕಾಯುಕ್ತರು ಧನಂಜಯ ಕೈಗೆ 10 ಸಾವಿರ ರೂ. ನೀಡಿ ಪೊಲೀಸರಿಗೆ ನೀಡುವಂತೆ ತಿಳಿಸಿದರು. ಅಲ್ಲದೇ, ಅವರ ಹಿಂದೆ ಪೊಲೀಸರು ತೆರಳಿದ್ದರು.
ಡಿಸ್ಪೆನ್ಸರಿ ರಸ್ತೆಯ ಜಾನ್ಸನ್ ಬಿಲ್ಡಿಂಗ್ ಸಮೀಪ ಧನಂಜಯ್ ನಿಂತಿದ್ದಾಗ ಪೊಲೀಸ್ ಪೇದೆಗಳಾದ ಅರುಣ್, ರಮೇಶ್ ಹಾಗೂ ರಾಜ್ ಬಂದರು. ಲಂಚದ ಹಣವಾಗಿ 10 ಸಾವಿರ ರೂ. ಪಡೆಯುತ್ತಿದ್ದಂತೆ ಲೋಕಾಯುಕ್ತ ಸಿಬ್ಬಂದಿ ಹಿಡಿದುಕೊಳ್ಳಲು ಮುಂದೆ ಬಂದರು. ಆಗ ಅಪಾಯ ವಾಸನೆ ಬಡಿದು, ಬಂದವರು ಲೋಕಾಯುಕ್ತರು ಎಂಬುದು ತಿಳಿಯುತ್ತಿದ್ದಂತೆ ಮೂವರು ಪೇದೆಗಳು ಜನಜಂಗುಳಿ ಮಧ್ಯೆ ಓಡಿ ಪರಾರಿಯಾದರು. ಜೊತೆಗೆ ಧನಂಜಯ ಬಳಿ ಇದ್ದ 4,500 ರೂ. ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. |