ಚಾಮರಾಜ ಕ್ಷೇತ್ರದ ಶಾಸಕ ಎಸ್.ಶಂಕರಲಿಂಗೇಗೌಡ ಅವರಿಗೆ ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿದ್ದು, ಈ ಬಗ್ಗೆ ಪೊಲೀಸ್ ವರಿಷ್ಠರಿಗೆ ದೂರು ನೀಡಲು ಹೋದರೆ ಅದೊಂದು ಸಣ್ಣ ಘಟನೆ ಎಂದು ದೂರು ಸ್ವೀಕರಿಸಲು ಮೀನ-ಮೇಷ ಎಣಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಶಂಕರಲಿಂಗೇಗೌಡ ಅವರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಚೆನ್ನೈಯಿಂದ ನಿರಂತರವಾಗಿ ದೂರವಾಣಿ ಮೂಲಕ ಕೊಲೆ ಬೆದರಿಕೆ ಬರುತ್ತಿರುವುದಾಗಿ ದೂರಿರುವ ಅವರು, ಅದನ್ನು ವಿವಿಧ ಕಾಯಿನ್ ಬೂತ್‌ಗಳಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕರಿಗಳಲ್ಲಿ ತಿಳಿಸಲು ಹೋದಾಗ, ಇದೊಂದು ಸಣ್ಣ ವಿಷಯ ಎಂಬುದಾಗಿ ಹೇಳಿದ್ದಾರೆ. ಶಾಸಕರಾದ ನಮಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದಾದ ಮೇಲೆ ಸತತ ನಾಲ್ಕು ಬಾರಿ ಗೆದ್ದ ಶಾಸಕರಿಗೆ ರಕ್ಷಣೆ ಇಲ್ಲ ಎಂದಾದ ಮೇಲೆ ಜನಸಾಮಾನ್ಯರಿಗೆ ರಕ್ಷಣೆ ನೀಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಕೆಲವು ತಿಂಗಳ ಹಿಂದೆ ತಮಿಳು ಒಕ್ಕಣೆಯಲ್ಲಿರುವ ಕೊಲೆ ಬೆದರಿಕೆ ಪತ್ರವೊಂದು ಬಂದಿದ್ದು, ಅದರ ಪ್ರತಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಸ್ಪೀಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿರುವುದಾಗಿ ಹೇಳಿದರು. |