ಉಪಚುನಾವಣೆ ಸಂದರ್ಭದಲ್ಲಿ ಮಾಜಿ ಸಂಸದ ಮಾದೇಗೌಡ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ರಕ್ಷಣೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಆಚಾರ್ಯ ಸೇರಿದಂತೆ ಮೂವರ ವಿರುದ್ಧ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಕಳೆದ ಡಿಸೆಂಬರ್ 30ರಂದು ತಮ್ಮ ಮೇಲೆ ಹಲ್ಲೆ ನಡೆಸಿ ಗಾಂಧಿಭವನದ ಮೇಲೆ ಕಲ್ಲು ತೂರಿ ಜಖಂಗೊಳಿಸಲು ಕುಮ್ಮಕ್ಕು ನೀಡಿರುವ ಡಿ.ಸಿ.ತಮ್ಮಣ್ಣ ಅವರನ್ನು ಬಂಧಿಸುವಲ್ಲಿ ವಿಫಲವಾಗಿರುವ ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ಧ ಸಹ ಪ್ರಕರಣ ದಾಖಲಿಸಿದ್ದಾರೆ.
ಹಲ್ಲೆ ನಡೆದ ಬಗ್ಗೆ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕೂಡ ಈವರೆಗೂ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ, ಗೃಹ ಸಚಿವರ ಜತೆ ಡಿ.ಸಿ.ತಮ್ಮಣ್ಣ ಇದ್ದರೂ ಸಹ ಅವರನ್ನು ಪೊಲೀಸರಿಗೆ ಒಪ್ಪಿಸಲು ವಿಫಲರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಖಾಸಗಿ ದೂರನ್ನು ನ್ಯಾಯಾಲಯದಲ್ಲಿ ಸಲ್ಲಿಸಿರುವುದಾಗಿ ಹೇಳಿದರು.
ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಾವು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದ್ದು,ಜಿಲ್ಲಾಧಿಕಾರಿಗಳು ತಕ್ಷಣ ಅವರನ್ನು ಬಂಧಿಸಲು ತಂಡವೊಂದನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದರೂ ಸಹ ಈವರೆಗೂ ಡಿ.ಸಿ.ತಮ್ಮಣ್ಣ ಅವರನ್ನು ಬಂಧಿಸಿಲ್ಲ ಎಂದು ದೂರಿದರು. |