ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಪಕ್ಷ ಶರಣಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ರಾಜಕೀಯ ಜೀವನದುದ್ದಕ್ಕೂ ಯಾವುದೇ ಮುಖ್ಯಮಂತ್ರಿಗಳ ಜತೆ ಹೊಂದಾಣಿಕೆಯ ರಾಜಕಾರಣ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರ ಇಂತಹ ಬಾಲಿಶ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಇಂತಹ ಹೇಳಿಕೆಗಳನ್ನು ಕೈ ಬಿಡಬೇಕು ಎಂದು ತಾಕೀತು ಮಾಡಿದರು. ಮುಖ್ಯಮಂತ್ರಿ ಅವರನ್ನು ಕಾಂಗ್ರೆಸ್ ಮುಖಂಡರು ಭೇಟಿ ಮಾಡಿದ್ದು ಗುಲ್ಬರ್ಗಾದಲ್ಲಿ ಜ.19 ರಂದು ನಡೆಯಲಿರುವ ಸರ್ವಧರ್ಮ ಸಮ್ಮೇಳನಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲು ಹೋಗಿದ್ದೇವು. ಬದಲಾಗಿ ಸೇಡಿನ ರಾಜಕಾರಣ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಪ್ರತಿಪಪಕ್ಷದಲ್ಲಿ ಕೆಲಸ ಮಾಡಿದಾಗ ಮುಖ್ಯಮಂತ್ರಿಗಳಾಗಿರುವ ಅನೇಕರ ಬಳಿ ಕೆಲಸ ಮಾಡಿದ್ದೇನೆ. ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಕುಮಾರಸ್ವಾಮಿ ಇಂತಹ ಹೇಳಿಕೆಗಳ ಮೂಲಕ ಕಾಂಗ್ರೆಸ್‌ನ ನೈತಿಕ ಬಲ ಕುಗ್ಗಿಸಲು ಸಾಧ್ಯವಿಲ್ಲ ಎಂದರು. ಗಣಿ ಹಗರಣ ಒತ್ತುವರಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಮೊದಲಿನಿಂದಲೂ ಬೇಡಿಕೆ ಇದೆ. ಈಗಲೂ ನಾವು ಅದೇ ಬೇಡಿಕೆಗೆ ಬದ್ಧರಾಗಿದ್ದೇವೆ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ಭದ್ರಾವತಿ ಶಾಸಕ ಸಂಗಮೇಶ್ ಅವರ ಮೇಲೆ ಜೆಡಿಎಸ್‌ನ ಗೂಂಡಾಗಳು ದಾಳಿ ಮಾಡಿದ್ದಾರೆ. ಆದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಸಂಗಮೇಶ್ ಅವರ ಮೇಲೆ ಪ್ರಕರಣ ದಾಖಲಿಸುವ ಪ್ರಯತ್ನ ನಡೆದಿದೆ ಎಂದು ಖರ್ಗೆ ಕಿಡಿಕಾರಿದರು.
|