ಸೊರಬದಲ್ಲಿ ಬಹುಕೋಟಿ ವೆಚ್ಚದ ದಂಡಾವತಿ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಸಂಜೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಶಂಕುಸ್ಥಾಪನೆ ನೆರವೇರಿಸಿದರು.
ಯಾವುದೇ ಕಾರಣಕ್ಕೂ ದಂಡಾವತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ತೀವ್ರ ಪ್ರತಿರೋಧ ಒಡ್ಡಿದ್ದರು. ಆದರೆ ಯಾವುದೇ ಕಾರಣಕ್ಕೂ ದಂಡಾವತಿ ಯೋಜನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದರು.
ಸುಮಾರು 272ಕೋಟಿ ರೂ.ವೆಚ್ಚದ ದಂಡಾವತಿ ಯೋಜನೆಗೆ ಸಾರ್ವಜನಿಕರ ವಿರೋಧ ನಡುವೆ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್‌ನೊಂದಿಗೆ ಚಾಲನೆ ನೀಡಿದರು.
ಏತನ್ಮಧ್ಯೆ ದಂಡಾವತಿ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಭಯದಿಂದ ಸೊರಬ ಮುಡಗೋಡು ನಿವಾಸಿ ರೈತನಾದ ಶಿವಪ್ಪ ವಿಷಸೇವಿಸಿ ಸಾವನ್ನಪ್ಪಿದ್ದಾನೆ.
ಮೃತ ಕುಟುಂಬಕ್ಕೆ ಪರಿಹಾರ:ದಂಡಾವತಿ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಭಯದಿಂದ ವಿಷಸೇವಿಸಿ ಸಾವನ್ನಪ್ಪಿರುವ ಶಿವಪ್ಪ ಕುಟುಂಬಕ್ಕೆ ಒಂದು ಲಕ್ಷ ರೂ.ಪರಿಹಾರ ಘೋಷಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜಕೀಯ ಪ್ರತಿಷ್ಠೆ:ದಂಡಾವತಿ ಯೋಜನೆ ಮಾಡಿಯೇ ಸಿದ್ದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರೆ, ಯಾವುದೇ ಕಾರಣಕ್ಕೂ ಜನವಿರೋಧಿ ದಂಡಾವತಿ ಯೋಜನೆ ಶಂಕುಸ್ಥಾಪನೆಗೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ,ಸಮಾಜವಾದಿ ಪಕ್ಷದ ವರಿಷ್ಠ ಬಂಗಾರಪ್ಪ ಕೂಡ ಗುಡುಗಿದ್ದರು.
ಮಂಗಳವಾರ ಸಾವಿರಾರು ಗ್ರಾಮಸ್ಥರು,ರೈತರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಸಮಾಜವಾದಿ ಪಕ್ಷದ ಮಧು ಬಂಗಾರಪ್ಪ, ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ ಬೆಂಬಲ ನೀಡಿದ್ದರು.
ಆದರೂ ಸರ್ಕಾರ ಪೊಲೀಸ್ ಸರ್ಪಗಾವಲು ಹಾಕಿ, ಪ್ರಮುಖ ಮುಖಂಡರನ್ನು ಬಂಧಿಸುವ ಮೂಲಕ ದಂಡಾವತಿ ಯೋಜನೆಗೆ ಚಾಲನೆ ನೀಡಿದೆ. |