"ನಾವಿರೋದು ನಿಮ್ಮ ರಕ್ಷಣೆಗಾಗಿ. ನಡೆದ ಘಟನೆಯಿಂದ ನಿಮಗೆಷ್ಟು ಆತಂಕವಾಗಿದೆಯೋ ಅಷ್ಟೇ ಆತಂಕ ನಮಗೂ ಆಗಿದೆ. ಆದಷ್ಟೂ ಬೇಗ ಅಪರಾಧಿಗಳನ್ನು ಪತ್ತೆ ಹಚ್ಚುತ್ತೇವೆ. ಯಾವುದೇ ಕಾರಣಕ್ಕೂ ನಿವಾಸಿಗಳು ಭಯ, ಆತಂಕದಿಂದ ಜೀವಿಸದಂತೆ ಭರವಸೆ ಕೊಡುತ್ತೇವೆ".
ಇದು ಇತ್ತೀಚೆಗಷ್ಟೇ ವೃದ್ಧ ದಂಪತಿಗಳ ಕೊಲೆಯಿಂದ ತತ್ತರಿಸಿದ ಜಯನಗರದ ನಿವಾಸಿಗಳಿಗೆ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ನೀಡಿದ ಭದ್ರ ಭರವಸೆ. ಈ ಭರವಸೆ ಸಿಕ್ಕಿದ್ದು ಜಯನಗರ ನಾಗರಿಕರ ಕ್ಷೇಮಾಭಿವೃದ್ದಿ ಸಂಘಗಳ ಒಕ್ಕೂಟ ಮಂಗಳವಾರ ಹಮ್ಮಿಕೊಂಡಿದ್ದ 'ಜನಸಂವಾದ' ಕಾರ್ಯಕ್ರಮದಲ್ಲಿ.
ಆಯುಕ್ತರು ಭರವಸೆ ನೀಡಿದ್ದು ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ತಮ್ಮ ತಂಡದ ಸಮ್ಮುಖದಲ್ಲಿ. ಸಂವಾದದಲ್ಲಿ ನಾಗರಿಕರು ಸಮಸ್ಯೆಗಳ ಸರಮಾಲೆಯನ್ನೇ ಹರಿಬಿಟ್ಟರು. ಸಂಚಾರ ಸಮಸ್ಯೆ, ಬೀದಿ ವ್ಯಾಪಾರಿಗಳ ಸಮಸ್ಯೆ, ವೇಶ್ಯಾವಾಟಿಕೆ, ಮಾದಕ ದ್ರವ್ಯ ಮಾರಾಟ, ನಿದ್ದೆಗೆಡಿಸುವ ಯುವಕರ ವ್ಹೀಲಿಂಗ್, ಸರಗಳ್ಳತನ .. ಇವು ಜಯನಗರದಲ್ಲಿ ನಿವಾಸಿಗಳು ಮುಂದಿಟ್ಟ ಸಮಸ್ಯೆಗಳು.
ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತ ತಳ್ಳು ವ್ಯಾಪಾರಿಗಳ ಹಾವಳಿ ಹೆಚ್ಚಾಗಿ ಓಡಾಡೋದಿಕ್ಕೆ ಆಗಲ್ಲ ಸಾರ್.. ಎಂಬ ನಿವಾಸಿಯೊಬ್ಬರ ಪ್ರಶ್ನೆಗೆ ಆಯುಕ್ತರು, ಫೆಬ್ರವರಿ 15ಕ್ಕೆ ನನ್ನ ಬಳಿ ಬನ್ನಿ. ಒಬ್ಬರಾದರೂ ತಳ್ಳುಗಾಡಿ ವ್ಯಾಪಾರಿಗಳು ಇದ್ದರೆ ಮತ್ತೆ ಹೇಳಿ ಎಂದು ಕಟುಕವಾದ ಉತ್ತರ ನೀಡಿದರು.
"ಪೊಲೀಸ್ ಠಾಣೆಗೆ ಹೋದರೆ ದೂರು ದಾಖಲಿಸುವುದೇ ಇಲ್ಲ ನಿಮ್ಮ ಪೊಲೀಸರು .." ಎಂಬ ಆರೋಪಕ್ಕೆ ಇಂತಹ ಸಮಸ್ಯೆಗಳಿವೆ. ಇಂತಹ ಪ್ರಕಟಣಗಳನ್ನು ನನ್ನ ಗಮನಕ್ಕೆ ತನ್ನಿ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ನಡೆಸುವ ಜನತಾದರ್ಶನದಲ್ಲಿ ಇದುವರೆಗೆ 500 ಪ್ರಕರಣಗಳನ್ನು ದಾಖಲಿಸುವಂತೆ ನಿರ್ದೇಶನ ನೀಡಿದ್ದೇನೆ. ಪ್ರಕರಣ ದಾಖಲಿಸದೇ ಇದ್ದುದಕ್ಕೆ 25 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು. |