ಗಡಿ ಕನ್ನಡಿಗರ ರಾಜ್ಯಮಟ್ಟದ ಸಮಾವೇಶ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಜ.16, 17 ರಂದು ನಡೆಯಲಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಸಮಾವೇಶವನ್ನು ಆಯೋಜಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು. ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾವೇಶವನ್ನು ಉದ್ಘಾಟಿಸಿಲಿದ್ದಾರೆ. 250ಕ್ಕೂ ಹೆಚ್ಚು ಪ್ರತಿನಿಧಿಗಳು, ಸಚಿವರು, ಸಾಹಿತಿಗಳು ಪಾಲ್ಗೊಳ್ಳುವರು.
ಸಮಾವೇಶದಲ್ಲಿ ನಾನಾ ಗೋಷ್ಠಿಗಳು, ಜಾನಪದ ಜಾತ್ರೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು. ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಮೂರು ಅಂಶ ಕುರಿತು ಬರಗೂರು ರಾಮಚಂದ್ರಪ್ಪ, ವಾಟಾಳ್ ನಾಗರಾಜ್ ಹಾಗೂ ತಾವು ಸರ್ಕಾರಕ್ಕೆ ಸಲ್ಲಿಸಿರುವ 40 ಬೇಡಿಕೆಗಳುಳ್ಳ ವರದಿ, ಗೋಷ್ಠಿಗಳಲ್ಲಿ ಮಂಡನೆಯಾಗುವ ಪ್ರಬಂಧಗಳನ್ನು ಅಧರಿಸಿ ನಿರ್ಣಯ ಕೈಗೊಳ್ಳಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಅವರು ವಿವರಿಸಿದರು.
ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾ ನಡೆಸಲು ಮರಾಠಿಗರಿಗೆ ಅವಕಾಶ ಕೊಡಬಾರದು ಎಂದು ಚಂದ್ರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. |