ಬೆಂಗಳೂರು: ಫ್ರೇಜರ್ ಟೌನ್ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಠಾಣೆಯಲ್ಲಿ ಬುಧವಾರ ರಾತ್ರಿ ನಿಗೂಢವಾಗಿ ಮೃತನಾಗಿದ್ದು, ಇದು ಲಾಕಪ್ ಸಾವು ಎಂದು ಸ್ಥಳೀಯರು ಸಂಶಯಿಸಿದ್ದಾರೆ.
ಪಾಟರಿ ಟೌನ್ ನಿವಾಸಿ ಅರುಣ (28) ಮೃತಪಟ್ಟ ವ್ಯಕ್ತಿ. ಪಾಟರಿ ಟೌನ್‌ನಲ್ಲಿ ಸಂಜೆ 7.45 ರ ಸುಮಾರಿಗೆ ಗುಂಪು ಗಲಭೆ ಏರ್ಪಟ್ಟ ಸಂದರ್ಭದಲ್ಲಿ ಅಲ್ಲಿಗೆ ಧಾವಿಸಿದ ಫ್ರೇಜರ್ ಟೌನ್ ಪೊಲೀಸರು ಹೂವಿನ ವ್ಯಾಪಾರಿ ಅರುಣನನ್ನು ಬಂಧಿಸಿದ್ದರು. ಈ ವಿಚಾರ ತಿಳಿದ ಅರುಣನ ಹೆತ್ತವರು ಪೊಲೀಸ್ ಠಾಣೆಗೆ ಧಾವಿಸಿದರು. ಆ ಹೊತ್ತಿಗಾಗಲೇ ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಹಾರಿಕೆಯ ಉತ್ತರ ನೀಡಿದ್ದರು.
ಹೆತ್ತವರು ಆಸ್ಪತ್ರೆಗಳಲ್ಲಿ ಹುಡುಕಿ ವಿಫಲವಾಗಿ ಮರಳಿ ಬಂದಾಗ ಅರುಣ ಸತ್ತಿದ್ದಾನೆಂದೂ, ಆತಮ ಮೃತದೇಹ ಫ್ರೇಜರ್ ಟೌನ್ ಸಂತೋಷ್ ಆಸ್ಪತ್ರೆಯಲ್ಲಿದೆ ಎಂದು ಪೊಲೀಸರು ತಿಳಿಸಿದರು.
ಪೊಲೀಸರ ವರ್ತನೆಯಿಂದ ಕುಪಿತರಾದ ಸ್ಥಳೀಯರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಲಘುಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಲಾಯಿತು.
ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯತ್ನಿಸಿದಾಗ ಅರುಣ್‌ನನ್ನು ಬಂಧಿಸಲಾಗಿದ್ದು ಈ ಸಂದರ್ಭದಲ್ಲಿ ಆತನಿಗೆ ಎದೆನೋವು ಉಂಟಾಗಿ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
|