ನೆಲಮಂಗಲದ ಸಮೀಪ ಮೂವರು ಶಾಲಾ ಮಕ್ಕಳು ಆಟವಾಡಲೆಂದು ನೀರಿಗಿಳಿದು ಮೇಲೆ ಬರಲಾರದೆ ಮೃತಪಟ್ಟಿದ್ದಾರೆ. ಭಾನುವಾರ ಈ ಘಟನೆ ಸಂಭವಿಸಿದ್ದು, ಮೂರು ದಿನಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಕಡಬಗೆರೆಯ ನಿವಾಸಿ ಹನುಮಂತಯ್ಯನವರ ಪುತ್ರರಾದ ಸಂತೋಷ್ (9), ಸಂಪತ್ (6) ಹಾಗೂ ನಾಗರಾಜು ಪುತ್ರ ವಿನಯ್ ಕುಮಾರ್ (9) ಮೃತಪಟ್ಟವರು. ಮಕ್ಕಳು ಆಟವಾಡಲೆಂದು ಊರಿಗೆ ಸಮೀಪದ ಗಿಡ್ಡೇನಹಳ್ಳಿ ಕೆರೆಯಲ್ಲಿ ನೀರಿಗೆ ಇಳಿದಿದ್ದರು. ಇಳಿಯುವ ಮುನ್ನ ತಮ್ಮ ಬಟ್ಟೆಗಳನ್ನು ತೆಗೆದು ತುಂಡಾಗಿ ನೆಲದಲ್ಲಿ ಬಿದ್ದಿದ್ದ ತೆಂಗಿನ ಮರದಡಿ ಸಿಕ್ಕಿಸಿದ್ದರು. ಕೆರೆಯಲ್ಲಿ 15 ಅಡಿ ಆಳ ಇದ್ದ ಹೊಂಡ ಸಮೀಪ ಆಟವಾಡುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾರದೆ ಮೃತಪಟ್ಟಿದ್ದಾರೆ.
ಕೆರೆಯ ಸಮೀಪ ಜನರು ಸುಳಿದಾಡುವುದು ವಿರಳವಾದ್ದರಿಂದ ಇವರ ಸಾವು ಯಾರ ಗಮನಕ್ಕೂ ಬರಲಿಲ್ಲ. ಪೋಷಕರು ಭಾನುವಾರ ರಾತ್ರಿಯಿಂದ ಸಂಬಂಧಿಕರ ಮನೆ, ಮಕ್ಕಳ ಸ್ನೇಹಿತರ ಮನೆಯಲ್ಲೆಲ್ಲಾ ಹುಡುಕಾಡಿದರು. ಆದರೆ ಬಾಲಕರು ಎಲ್ಲಿಯೂ ಪತ್ತೆಯಾಗಲಿಲ್ಲ.
ಬುಧವಾರ ಹಬ್ಬದ ಕಾರಣ ಗೋವುಗಳನ್ನು ತೊಳೆಯಲೆಂದು ಚಿಕ್ಕಬೀರಪ್ಪ ಎಂಬವರು ಕೆರೆಯ ಸಮೀಪಕ್ಕೆ ತೆರಳಿದಾಗ ಮೂರು ಶವಗಳು ತೇಲುತ್ತಿರುವುದು ಕಂಡು ಬಂತು. ಕೂಡಲೇ ಅವರ ಪೋಷಕರು ಹಾಗೂ ಪೊಲಿಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲಿಸರು ಶವವನ್ನು ಹೊರತೆಗೆದರು.
ಕೆರೆಯಲ್ಲಿ ಇಟ್ಟಿಗೆ ತಯಾರಿಗಾಗಿ 15 ಅಡಿ ಮಣ್ಣು ತೆಗೆದ ಕಾರಣ ಒಂದು ಭಾಗದಲ್ಲಿ ಹೊಂಡವಾಗಿದೆ. ನೀರು ತುಂಬಿದ್ದರಿಂದ ಕಾಣಿಸದೇ ಮಕ್ಕಳು ಈ ಹೊಂಡಕ್ಕೆ ಬಿದ್ದಿದ್ದಾರೆ.
|